ನಾಗಮಂಗಲ ತಾಲೂಕಿನ ಶ್ರೀ ಆದಿಚುಂಚನಗಿರಿಯಲ್ಲಿ ಧರ್ಮಧ್ವಜ ಸ್ಥಾಪನೆ ಮತ್ತು ನಾಂದಿ ಪೂಜೆ ಮಾಡುವ ಮೂಲಕ ಒಂಭತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. 
ಜಿಲ್ಲೆ

ಆದಿಚುಂಚನಗಿರಿ ಜಾತ್ರೆಗೆ ಚಾಲನೆ

ರವಿಕುಮಾರ್ ಪಿ. ಕೆ

ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶುಕ್ರವಾರ ಧರ್ಮಧ್ವಜ ಸ್ಥಾಪನೆ ಮತ್ತು ನಾಂದಿ ಪೂಜೆ ಮಾಡುವ ಮೂಲಕ 9 ದಿನಗಳ ಕಾಲ ನಡೆಯುವ ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.

ಜಾತ್ರಾ ಮಹೋತ್ಸವದ ಮೊದಲ ದಿನವಾದ ಶುಕ್ರವಾರ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಕ್ಷೇತ್ರಾದಿ ದೇವತೆಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ನಾಂದಿಪೂಜೆ, ಧರ್ಮಧ್ವಜ ಸ್ಥಾಪನೆ, ಮಹಾಕುಂಭಾಭಿಷೇಕ ಪೂಜಾ ಸೇರಿದಂತೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಜಾತ್ರೆಯ ಎರಡನೇ ದಿನವಾದ ಶನಿವಾರ ಸಂಜೆ ಮಠದಲ್ಲಿ ಚಂದ್ರಮೌಳೇಶ್ವರಸ್ವಾಮಿ ಉತ್ಸವ ನಡೆಯಲಿದೆ.

ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಆದಿಚುಂಚನಗಿರಿ ವಿವಿ ಉಪಕುಲಪತಿ ಡಾ.ಎಂ.ಎ.ಶೇಖರ್ ಸೇರಿದಂತೆ ವಿವಿಧ ಶಾಖಾಮಠಗಳ ಶ್ರೀಗಳು ಹಾಗೂ ಶ್ರೀಮಠದ ಭಕ್ತರು ಪಾಲ್ಗೊಂಡಿದ್ದರು.