ಜಿಲ್ಲೆ

ಹಿಂದು ಆದಿ ಬಣಜಿಗ ಬರೆಸಲು ನಿರ್ಧಾರ

ಕಲಬುರಗಿ: ಹಿಂದುಳಿದ ವರ್ಗಗಳ ಆಯೋಗ ಸೆ.22ರಿಂದ ಅ.7ರವರೆಗೆ ನಡೆಯುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂದಲ್ಲಿ ಹಿಂದು ಹಾಗೂ ಜಾತಿ, ಉಪ ಜಾತಿ ಕಾಲಂನಲ್ಲಿ ಆದಿ ಬಣಜಿಗ ಎಂದು ನಮೂದಿಸಲು ಸಮಾಜದವರು ಒಕ್ಕೋರಲಿನ ರ್ನಿಣಯ ಕೈಗೊಂಡರು.

ನಗರದ ಮೈಲಾರಲಿಂಗೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಸಮುದಾಯದ ಪ್ರಮುಖರ ಮಹತ್ವದ ಸಭೆಯಲ್ಲಿ, ಜಾತಿ ಕಾಲಂನಲ್ಲಿ ಆದಿ ಬಣಜಿಗ ಲಿಂಗಾಯತ ಬರೆಯದಿರಲು ಹಾಗೂ ಧರ್ಮದ ಕಾಲಂ ಬದಲು ಇತರೆ ಎಂದು ಬರೆಸದಿರಲು ನಿರ್ಧರಿಸಲಾಯಿತು. ಜಿಲ್ಲೆಯಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಆದಿ ಬಣಜಿಗ ಸಮಾಜದ ಮುಖಂಡರ ಸಭೆಯಲ್ಲಿ ಸುದೀರ್ ಚರ್ಚೆ ನಡೆಸಿ, ಕೊನೆಗೆ ಜಾತಿ ಹಾಗೂ ಉಪ ಜಾತಿ ಕಾಲಂನಲ್ಲಿ ಆದಿ ಬಣಜಿಗ ಬರೆಸಲು ಎಲ್ಲರೂ ಕೈ ಎತ್ತುವ ಮೂಲಕ ಒಮ್ಮತದಿಂದ ನಿರ್ಧರಿಸಲಾಯಿತು.

ಲಿಂಗಾಯಿತ ಸಮುದಾಯದ ಬಹುತೇಕರು ಜಾತಿ ಹಾಗೂ ಉಪ ಜಾತಿ ನಮೂದಿಸಲು ಮುಂದಾಗಿದ್ದು, ನಾವು 10ರಲ್ಲಿ 11 ಆಗುವುದು ಬೇಡ ಎಂದು ಹಲವರು ಸಲಹೆ ನೀಡಿದರು.

ಆದಿ ಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ಹಿರಿಯ ನ್ಯಾಯವಾದಿ ಶಿವಪುತ್ರಪ್ಪ ಬರುಡೆ ಮಾತನಾಡಿ, ಸಭೆಯಲ್ಲಿ 32 ಮುಖಂಡರ ಪೈಕಿ 20 ಜನರು ಜಾತಿ ಗಣತಿಯಲ್ಲಿ ಜಾತಿ ಕಾಲಂನಲ್ಲಿ ಆದಿ ಬಣಜಿಗ ಎಂದೇ ಬರೆಸಲು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಹತ್ತು ಜನರು ವಿವಿಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಬ್ಬರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಹೀಗಾಗಿ ಸಭೆಯಲ್ಲಿ ಎಲ್ಲರೂ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಬೇಕೆಂದರು. ಕೊನೆಗೆ ಎಲ್ಲರೂ ಜಾತಿ ಹಾಗೂ ಉಪಜಾತಿ ಕಾಲಂನಲ್ಲಿ ಆದಿ ಬಣಜಿಗ ಎಂದೇ ಬರೆಸಲು ಕೈ ಎತ್ತಿ ಬೆಂಬಲ ಸೂಚಿಸಿದರು.

ಆದಿ ಬಣಜಿಗ ಸಮಾಜದ ಮುಖಂಡರಾದ ರಾಜೇಂದ್ರ ವಿ. ಪಾಟೀಲ್​ ರೇವೂರ, ಹಾವೇರಿಯ ಗಂಗಾಧರ ಬಾಣದ, ರಾಯಭಾಗದ ಅಜ್ಜಪ್ಪ ನಾಗರಳ್ಳಿ, ಬಾಗಲಕೋಟೆಯ ಗಂಗಾಧರ ಉಳ್ಳಾಗಡ್ಡಿ, ವಿಜಯಪುರದ ಪ್ರಕಾಶ ಪಾಟೀಲ್​, ಕೊಪ್ಪಳದ ಸಾಹೇಬಗೌಡ, ನೀಲಕಂಠರಾವ ಮೂಲಗೆ, ಸೋಮಶೇಖರ ಟೆಂಗಳಿ, ಬಸವರಾಜ ಕೊನೆಕ್​, ಶಾಂತಪ್ಪ ಪಾಟೀಲ್​ ಕಣ್ಣೂರ, ಚಂದ್ರಕಾಂತ ಬಿರಾದಾರ, ಮಹಾದೇವಪ್ಪ ಪಾಟೀಲ್​, ವಿಶ್ವನಾಥ ಪಾಟೀಲ್​ ಗವನಳ್ಳಿ, ಸತೀಶ ಪಾಟೀಲ್​ ಆಲಗೂಡ, ಜಗನ್ನಾಥ ಶೇಗಜಿ, ಚಂದ್ರಕಾಂತ ಪಾಟೀಲ್​, ಅಪ್ಪಾಸಾಬ ಪಾಟೀಲ್​ ಮರತೂರ, ರಾಜೇಂದ್ರ ಕರೆಕಲ್​, ಪ್ರಕಾಶ ಪಾಟೀಲ್​ ಹೀರಾಪುರ, ಗುರುಶಾಂತ ಪಾಟೀಲ್​ ನಿಂಬಾಳ, ಶಶಿಕಲಾ ಟೆಂಗಳಿ, ರಾಜು ನವಲದಿ, ಡಾ. ಎಂ. ಎಸ್​. ಜೋಗದ, ಬಸವಣ್ಣೆಪ್ಪ ಅಂಕಲಗಿ, ಕಲ್ಯಾಣರಾವ ಬಿರಾದಾರ ಹಸರಗುಂಡಗಿ, ದಯಾನಂದ ಪಾಟೀಲ್​, ಶಿವಶರಣಪ್ಪ ಗೋಗಿ, ಯಶ್ವಂತರಾವ ಕಾಳೆ, ಅಂಬಣ್ಣ ಕುದರಿ, ಮಾಲಾ ಕಣ್ಣಿ ಸೇರಿದಂತೆ ಮುಂತಾದವರಿದ್ದರು.

ವೀರಶೈವ, ಲಿಂಗಾಯತವೂ ಬೇಡ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಧರ್ಮದ ಕಾಲಂನಲ್ಲಿ ಹಿಂದು ಬದಲು ಇತರೆ ಕಾಲಂನಲ್ಲಿ ಬರೆಸಲು ಹಾಗೂ ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಬರೆಸಲು ಕರೆ ಕೊಟ್ಟಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಇದುವರೆಗೆ ವೀರಶೈವ ಲಿಂಗಾಯತದಲ್ಲೇ ಇದ್ದರೂ ಆದಿ ಬಣಜಿಗ ಸಮಾಜಕ್ಕೆ ಪ್ರಾಮುಖ್ಯತೆ ದೊರಕಿಲ್ಲ. ಲಿಂಗಾಯತ 12ನೇ ಶತಮಾನದಲ್ಲಿ ಬಂದಿರುವುದು, ಆದಿ ಬಣಜಿಗ ಅದಕ್ಕಿಂತ ಪೂರ್ವದ್ದಾಗಿದೆ. ಪ್ರತ್ಯೇಕವಾಗಿ ಜಾತಿಯನ್ನಾಗಿ ಗುರುತಿಸಿಕೊಂಡರೆ ಪ್ರವರ್ಗ ಸೇರಿ ಇತರ ಗುರುತಿಸುವಿಕೆ ಅಳೆಯಲು ಸಾಧ್ಯವಾಗುತ್ತದೆ ಎಂದು ಮುಖಂಡರು ಸಭೆಯಲ್ಲಿ ವಿವರಣೆ ನೀಡಿದರು.

ಜಾಗೃತಿಗೆ ನಿರ್ಧಾರ: ಸಭೆಯಲ್ಲಿ ಆಗಿರುವ ರ್ನಿಣಯವನ್ನು ಸಮಾಜದ ಎಲ್ಲ ಮುಖಂಡರು ತಮ್ಮ ತಮ್ಮ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ತಿಳಿ ಹೇಳಬೇಕು. ಯಾವುದಕ್ಕೂ ಗೊಂದಲ ಬೀಳದಂತೆ ಸಮಾಜದ ಎಲ್ಲರೂ ಮುಂದಾಗಬೇಕೆಂದು ಕೋರಿದರು.