??????? 
ಜಿಲ್ಲೆ

ನಾಡ ಕಚೇರಿಯಲ್ಲಿ ಆಧಾರ್ ಪ್ರಕ್ರಿಯೆ ಸ್ಥಗಿತ!

ಶಿವರಾಜ.ಎಂ

 ಬರಗೇನಹಳ್ಳಿ ಚಿಕ್ಕರಾಜು ದಾಬಸ್‌ಪೇಟೆ

ನೆಲಮಂಗಲ ತಾಲೂಕು ಸೋಂಪುರ ಹೋಬಳಿ ವ್ಯಾಫ್ತಿಯ ಸೋಂಪುರ ನಾಡ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ್‌ಕಾರ್ಡ್ ಕೇಂದ್ರ ಸುಮಾರು 9 ತಿಂಗಳಿಂದ ಸ್ಥಗಿತಗೊಂಡಿದ್ದು ಸಾರ್ವಜನಿಕರು ಪರದಾಡುವಂತಾಗಿದೆ. ಯಾವುದೇ ನೋಂದಣಿ, ತಿದ್ದುಪಡಿ ಮತ್ತಿತರ ಕೆಲಸಗಳಾಗದೆ ಸ್ಥಳೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನೆಲಮಂಗಲ ತಾಲೂಕಿನಲ್ಲಿ ಸೋಂಪುರ ನಾಡ ಕಚೇರಿ, ತ್ಯಾಮಗೊಂಡ್ಲು ನಾಡಕಚೇರಿ ಹಾಗೂ ನೆಲಮಂಗಲದ ಕಂದಾಯ ಭವನದಲ್ಲಿ ಆಧಾರ್ ನೋಂದಣಿ ಮತ್ತಿತರ ಕೆಲಸಗಳು ನಡೆಯುತ್ತಿವೆ.

ಅದರಲ್ಲೂ ಸೋಂಪುರ ಹೋಬಳಿ ಕೈಗಾರಿಕಾ ಪ್ರದೇಶವಾಗಿದ್ದು, ಅತಿ ಹೆಚ್ಚು ಜನ ಸಂಖ್ಯೆ ಇದೆ, ಜತೆಗೆ ಜೂನ್ ತಿಂಗಳು ಶುರುವಾದರೆ ಶಾಲೆಗಳ ಪ್ರವೇಶಕ್ಕೆ ಮಕ್ಕಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಆಧಾರ್ ಕಾರ್ಡ್ ಇಲ್ಲದೆ ಮಕ್ಕಳ ಶಾಲಾ ಪ್ರವೇಶಕ್ಕೂ ತೊಡಕಾಗಿದೆ ಎಂಬ ಆರೋಪ ಕೇಳಿಬರುತ್ತಿದೆ, ಮನೆಯ ವಿಳಾಸ ಬದಲಾವಣೆ, ಮೊಬೈಲ್ ಸಂಖ್ಯೆ ಬದಲಾವಣೆ ಸೇರಿ ಸರ್ಕಾರಿ ದಾಖಲೆಗಳಿಗಾಗಿ ಆಧಾರ್ ಕೇಂದ್ರದ ಅವಶ್ಯಕತೆ ಅನಿವಾರ್ಯವಾಗಿದೆ ಆದರೆ ಇಲ್ಲಿನ ಕಾರ್ಯಚಟುವಟಿಕೆ ಬಂದ್ ಆಗಿರುವುದಿಂದ ಸಾರ್ವಜನಿಕರಿಗೆ ದಿಕ್ಕು ತೋಚದಂತಾಗಿದೆ.

ದೂರದೂರಿಗೆ ಹೋಗಬೇಕು:

ಇಲ್ಲಿನ ಕಾರ್ಯಚಟುವಟಿಕೆ ಬಂದ್ ಆಗಿರುವುದರಿಂದ ಆಧಾರ್ ಪ್ರಕ್ರಿಯೆಗೆ ನೆಲಮಂಗಲಕ್ಕೆ ಹೋಗಬೇಕು ಅಲ್ಲಿ ಜನರ ದಂಡೆ ಇರುತ್ತದೆ, ಅಲ್ಲದೆ ಆಗಾಗ ಸರ್ವರ್ ಸಮಸ್ಯೆ ಎಂದು ದಿನಗಟ್ಟಲೆ ಕಾಯಬೇಕಾಗಿದೆ, ಇನ್ನು ತುಮಕೂರು ಒನ್ ಕೇಂದ್ರಕ್ಕೆ ಹೋಗಬೇಕು ನೆಲಮಂಗಲ ಕಂದಾಯ ಇಲಾಖೆ ಕಚೇರಿಯಲ್ಲಿಯೂ ಇದೆ ಸಮಸ್ಯೆಗಳಿವೆ ಎಂದು ಸಾರ್ವಜನಿಕರು ಅಲವತ್ತುಗೊಂಡಿದ್ದಾರೆ.

ಸಮಸ್ಯೆಗಳ ಆಗರ:

ಆರಂಭದಲ್ಲಿ ನಾಡಕಚೇರಿಯಲ್ಲಿ ಎಲ್ಲ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತಿತ್ತು ನಂತರದ ದಿನಗಳಲ್ಲಿ ಏನಾಯಿತೋ ಗೊತ್ತಿಲ್ಲ ಯಾವುದೇ ಕೆಲಸ ಕಾರ್ಯಗಳಿಗೂ ಸತಾಯಿಸುವ ಚಾಳಿ ಕಂಡುಬರುತ್ತಿದೆ. ಒಮ್ಮೆ ಸಿಬ್ಬಂದಿ ಇಲ್ಲ ಅಂತಾರೆ, ಮತ್ತೊಮ್ಮೆ ಸರ್ವರ್ ಸಮಸ್ಯೆ ಅನ್ನುತ್ತಾರೆ ಹೀಗೆ ಏನೇನೋ ಸಬೂಬು ಹೇಳುತ್ತಿದ್ದವು ಹೀಗೆ ಕಳೆದ 9 ತಿಂಗಳಿಂದ ಎಲ್ಲ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ ಹೀಗಾದರೆ ಸರ್ಕಾರಿ ಕೆಲಸ ಕಾರ್ಯಗಳಿಗೆ ಯಾರನ್ನು ಪ್ರಶ್ನಿಸುವುದು ಎಂಬುದು ಗೊಂದಲವಾಗಿದೆ ಎಂಬುದು ಸ್ಥಳೀಯರ ಆಕ್ರೋಶವಾಗಿದೆ.

ಇಲ್ಲಿನ ನಾಡಕಚೇರಿಯಲ್ಲಿ ಅರಂಭದಲ್ಲಿ ಅಧಾರ್ ಪ್ರಕ್ರಿಯೆ ಉತ್ತಮವಾಗಿತ್ತು ನಂತರದ ದಿನಗಳಲ್ಲಿ ನಿಧಾನವಾಗಿ ಸುಮಾರು 9 ತಿಂಗಳಿಂದ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ, ಇದರಿಂದ ಸಾರ್ವಜನಿಕರು ಹೊಸದಾಗಿ ಆಧಾರ್ ಮಾಡಿಸಲು, ವಿಳಾಸ ಬದಲಾವಣೆ, ಮೊಬೈಲ್ ಸಂಖ್ಯೆ ಬದಲಾವಣೆ ಮತ್ತಿತರ ಪ್ರಕ್ರಿಯೆಗೆ ಅವಕಾಶ ಇಲ್ಲದಂತಾಗಿದೆ. ಈ ಬಗ್ಗೆ ತಹಸೀಲ್ದಾರ್ ಗಮನಕ್ಕೆ ತಂದರೂ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ದಿನೇಶ ನಾಯಕ,ಶಿವಗಂಗೆ ಗ್ರಾಮ ಪಂಚಾಯತಿ ಸದಸ್ಯ

ನಾಡಕಚೇರಿಯಲ್ಲಿ ಆಧಾರ್ ನೋಂದಣಿ ಸೇರಿ ಮತ್ಯಾವುದೇ ಆಧಾರ್ ಸಂಬಂಧಿತ ಪ್ರಕ್ರಿಯೆ ನಡೆಯುತ್ತಿಲ್ಲ ಎಂಬ ಬಗ್ಗೆ ಈಗಾಗಲೇ ಸಾರ್ವಜನಿಕರಿಂದ ದೂರು ಬಂದಿದೆ. ನಾಡಕಚೇರಿಯಲ್ಲಿ ನೋಂದಣಿ ಆಪರೇಟರ್ ಇಲ್ಲದೆ ಸಮಸ್ಯೆ ಉದ್ಭವಿಸಿದೆ, ಈ ಬಗ್ಗೆ ಬೆಂಗಳೂರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದು. ಅಪರೇಟರ್ ಕೊಡುವಂತೆ ಪತ್ರ ಮುಖೇನ ಮನವಿ ಸಲ್ಲಿಸಲಾಗಿದೆ. ಆಪರೇಟರ್ ಬಂದ ಬಳಿಕ ಈ ಸಮಸ್ಯೆ ಬಗೆಹರಿಯಲಿದೆ.

ಬಿ.ಸಿ.ಶಶಿಧರ, ಉಪ ತಹಸೀಲ್ದಾರ್