ಚಿಕ್ಕಬಳ್ಳಾಪುರ: ಆದಿಚುಂಚನಗಿರಿ ಮಠದ ಪೀಠಾಧಿಪತಿ ಜಗದ್ಗುರು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಶ್ರೀ ವೀರಾಂಜನೇಯ ಸ್ವಾಮಿದೇವಾಲಯದ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು.
ಗುರುಶಿಷ್ಯರ ಸಂಬಂಧವನ್ನು ತಿಳಿಸುವ ಅಸತೋಮ ಸದ್ಗಮಯ ಎಂಬ ಮಂತ್ರವನ್ನು ಮತ್ತು ಓಂಕಾರವನ್ನು ಹೇಳಿಕೊಡುವುದರ ಮೂಲಕ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಪ್ರಿ ನರ್ಸರಿ ಮತ್ತು ಎಲ್.ಕೆ.ಜಿ ಮಕ್ಕಳಿಗೆ ಅಕ್ಕಿಯ ಮೇಲೆ ಅಕ್ಷರಾಭ್ಯಾಸವನ್ನು ಮಾಡಿಸಲಾಯಿತು. ಇದರಲ್ಲಿ ಪಾಲಕರು ಭಾಗಿಯಾದರು. ಸ್ಥಳೀಯ ಭಕ್ತರು ಶ್ರೀಗಳ ಆಶೀರ್ವಾದ ಪಡೆದರು. ಇದಕ್ಕೂ ಮೊದಲು ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಮಕ್ಕಳಿಗೆ ಶಾಲೆ, ಮನೆಯಲ್ಲಿ ಉತ್ತಮ ಮಾರ್ಗದರ್ಶನ ಸಿಗಬೇಕು. ಚಿಕ್ಕ ವಯಸ್ಸಿನಿಂದಲೇ ಒಳ್ಳೆಯ ಮೌಲ್ಯಗಳನ್ನು ಬೆಳೆಸುವುದರ ಜತೆಗೆ ಹಿರಿಯರು ಮೊದಲು ಕಿರಿಯರಿಗೆ ಮಾದರಿಯಾಗಿರಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಕಾರ್ಯಕ್ರಮದದಲ್ಲಿ ಶ್ರೀ ಮಂಗಳನಾಥ ಸ್ವಾಮೀಜಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ, ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್, ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಗಾರ ಎನ್.ಶಿವರಾಮರೆಡ್ಡಿ ಮತ್ತಿತರರು ಇದ್ದರು.