ಗೋಕರ್ಣ: ಎಲ್ಲ ಕಾಲದಲ್ಲೂ ತಪಸ್ಸಿಗೆ ಅತ್ಯಪೂರ್ವವಾದ ಅದ್ಭುತ ಫಲವಿದೆ. ನಮ್ಮ ಜೀವನವನ್ನು ತತ್ವವೊಂದಕ್ಕೆ ಸಮರ್ಪಿಸಿಕೊಳ್ಳುವುದು ಮತ್ತು ಆ ತತ್ವಕ್ಕಾಗಿ ನಿರತ ಅನುಸಂಧಾನ ಕೈಗೊಳ್ಳುವುದು ಮಹಾ ತಪಸ್ಸಿಗೆ ಸರಿ ಸಮಾನವಾದುದಾಗಿದೆ ಎಂದು 31ನೇ ಅನಾವರಣ ಚಾತುರ್ಮಾಸ್ಯ ವ್ರತಧಾರಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಅಶೋಕೆಯ ಶ್ರೀಗುರುದೃಷ್ಟಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಖ್ಯಾತ ವಾಗ್ಮಿ, ವಿಶ್ವ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಶನ್ ಸಂಸ್ಥಾಪಕ, ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅವರಿಗೆ ವಾರ್ಷಿಕ ವಿಷ್ಣುಗುಪ್ತ ರಾಷ್ಟ್ರೀಯ ಸಮ್ಮಾನವನ್ನು ಪ್ರದಾನ ಮಾಡಿ ಶ್ರೀಗಳು ಆಶೀರ್ವದಿಸಿದರು.
ಮಹತ್ತರವಾದ ತತ್ವವೊಂದರ ಅನುಸಂಧಾನ ಎಂಬ ಧ್ಯಾನದಲ್ಲಿ ಉಳಿದೆಲ್ಲದರಿಂದ ನಿವೃತ್ತರಾಗಬೇಕು ಎನ್ನುವುದು ಹನುಮ-ಮತದ ಉಪದೇಶವಾಗಿದೆ. ಅಂತಹ ಮತ ತತ್ವದ ಅನುಸಂಧಾನದಿಂದ ಶ್ರೀವಿಷ್ಣುಸಹಸ್ರನಾಮ ಪ್ರಸಾರ ಮತ್ತು ಪ್ರವರ್ಧನೆಯ ಮಹಾ ತಪಸ್ಸನ್ನು ಕೈಗೊಂಡವರು ಡಾ.ಪಾರ್ಥಸಾರಥಿ ಅವರು. ದೇಶ-ವಿದೇಶಗಳಲ್ಲಿ ಶ್ರೀವಿಷ್ಣುಸಹಸ್ರನಾಮದ ಮಹತಿಯನ್ನು ಪ್ರಚುರ ಪಡಿಸಿ ಕೋಟಿಕೋಟಿ ಭಕ್ತರು ಇದರ ಪಠಣದಲ್ಲಿ ತೊಡಗುವಂತೆ ಮಾಡಿದ ಅಪರೂಪದ ಸಾಧಕರಾಗಿದ್ದಾರೆ. ಜಗದ ಅಸಂಖ್ಯ ಭಕ್ತಜನರನ್ನು ಈ ಮೂಲಕ ಭಗವಂತನ ಜೊತೆ ಜೋಡಿಸಿದ ಪುಣ್ಯ ಕೃತಾರ್ಥ ಅವರದ್ದಾಗಿದೆ ಎಂದರು.
ಗೋವರ್ಧನ ಗಿರಿಧಾರಿಯ ಸುಕ್ಷೇತ್ರವನ್ನು ಶ್ರೀವಿಷ್ಣುಸಹಸ್ರನಾಮ ಕ್ಷೇತ್ರವಾಗಿ ಪರಿವರ್ತಿಸುವಲ್ಲಿ ಅವರ ಪರಿಶ್ರಮ,ಕೊಡುಗೆ ಅನನ್ಯವಾದುದಾಗಿದೆ.ಇಂತಹ ಘನ ತಪೋನಿಷ್ಠರಿಗೆ ಈ ಸಮ್ಮಾನ ಪುರಸ್ಕಾರ ಪ್ರದಾನದ ಮೂಲಕ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ವಿಶೇಷ ಗೌರವಕ್ಕೆ ಭಾಜನವಾಗಿದೆ ಎಂದು ಶ್ರೀಗಳು ಡಾ.ಪಾರ್ಥಸಾರಥಿ ದಂಪತಿಯನ್ನು ಆಶೀರ್ವದಿಸಿದರು.
ರಾಷ್ಟ್ರೀಯ ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಪಾರ್ಥಸಾರಥಿ, ಕೆಲವೇ ವರ್ಷದ ಹಿಂದೆ ನಿರ್ಜನವಾಗಿದ್ದ ಅಶೋಕೆಯ ನೆಲದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸ್ಥಾಪನೆ ಮೂಲಕ ಸುಜ್ಞಾನ ಸಂವರ್ಧನೆಯ ನವನವೀನ ನೈಮಿಷಾರಣ್ಯವೊಂದರ ಮರು ಪ್ರತಿಷ್ಠಾಪನೆಯನ್ನು ರಾಘವೇಶ್ವರ ಶ್ರೀಗಳು ಕೈಗೊಂಡಿದ್ದಾರೆ.ಆದಿಶಂಕರರು ಮೂರು ಬಾರಿ ಸಂದರ್ಶಿಸಿ ಹರಸಿದ ಪ್ರಾಚೀನ ಪುಣ್ಯಸ್ಥಳವನ್ನು ಜ್ಞಾನ,ಚಿಂತನೆ,ವಿದ್ಯಾಬುದ್ಧಿಯ ಮಹಾನ್ ಕೇಂದ್ರವಾಗಿ ರೂಪಗೊಳಿಸುತ್ತಿರುವ ಶ್ರೀಗಳ ಮಹಾನ್ ಸಾಧನೆ ವರ್ತಮಾನದ ರಾಷ್ಟ್ರೀಯ ದಾಖಲೆಗೆ ಕಾರಣ ಎಂದರೆ ಅತಿಶಯವಲ್ಲ.ವಿದ್ಯಾರಣ್ಯ ಗುರುಶ್ರೇಷ್ಠರಿಂದ ವಿಜಯನಗರ ಮಹಾ ಸಾಮ್ರಾಜ್ಯದ ಸ್ಥಾಪನೆಯಾದಂತೆ, ಸಾಕ್ಷಾತ್ ದೈವೀಕ ಅವತಾರಧಾರಿಗಳಾದ ಶ್ರೀರಾಘವೇಶ್ವರ ಭಾರತೀ ಅವರಿಂದ ಜಗತ್ತಿನ ವಿವಿಧೆಡೆಯ ಮೇಧಾವಿಗಳ ಜ್ಞಾನಾರ್ಜನೆಯ ಮಹಾ ಸುಸ್ಥಾನವಾಗಿ ಅಶೋಕೆ ಪ್ರವಧನೆಗೊಂಡು ಧರ್ಮ ಸಾಮ್ರಾಜ್ಯದ ಪುನರ್ ನಿರ್ಮಾಣವಾಗಲಿದೆ ಎಂದು ಡಾ.ಪಾರ್ಥಸಾರಥಿ ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಾ.ಪಾರ್ಥಸಾರಥಿ ಅವರಿಂದ ಶ್ರೀಮಠದ ಹೊಸನಗರದಲ್ಲಿನ ಶ್ರೀಮಠದ ಪೂರ್ವಾಚಾರ್ಯ ಗುರುವರ್ಯರಿಂದ ಪ್ರತಿಷ್ಠಾಪಿತವಾದ ಅಪೂರ್ವ ಗೋವರ್ಧಗಿರಿಧಾರಿ ಶ್ರೀಗೋಪಾಲಕೃಷ್ಣ ದೇವಾಲಯದ ಅನಾವರಣ ನಡೆಯಿತು.
ವಿಶ್ವ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಶನ್ ಮುಖ್ಯಸ್ಥರಾದ ಮಂಗಳಾ ಭಾಸ್ಕರ, ವಿವಿವಿ ಗೌರವಾಧ್ಯಕ್ಷ ಡಿ.ಡಿ.ಶರ್ಮ, ಕೇಂದ್ರೀಯ ಸಮಿತಿ ಗೌರವಾಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಅಧ್ಯಕ್ಷ ಎಸ್.ಎಸ್.ಹೆಗಡೆ, ಉದ್ಯಮಿ ಜಿ.ಎಂ.ಹೆಗಡೆ, ಹವ್ಯಕ ಮಹಾಮಂಡಲದ ಉದಯಶಂಕರ ಭಟ್ಟ ಮಿತ್ತೂರು, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ, ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿವಿ.ಹೆಗಡೆ ಮತ್ತಿತರರಿದ್ದರು.