ಜಿಲ್ಲೆ

ಹಾಸಿಗೆ ಪೀಡಿತರ ಮನೆಗಳಿಗೆ ತೆರಳಿ ಆಧಾರ ಕಾರ್ಡ್‌ ಮಾಡಿಸಿಕೊಡಲು ಸಲಹೆ

Uttara Kannada - Subash Hegde

ಕಾರವಾರ: ಪ್ರಸ್ತುತ ಸರ್ಕಾರದ ಹಲವು ಯೋಜನೆಗಳ ಆರ್ಥಿಕ ನೆರವು ಪಡೆಯಲು ಆಧಾರ್ ಸಂಖ್ಯೆ ಅಗತ್ಯವಾಗಿದ್ದು, ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಅಶಕ್ತರಾಗಿ ಹಾಸಿಗೆ ಪೀಡಿತರಾದವರು ಆಧಾರ್ ಕಾರ್ಡ್ ಇಲ್ಲದ ಕಾರಣ ಸರಕಾರದ ಯಾವುದೇ ಯೋಜನೆಗಳಿಂದ ವಂಚಿತರಾಗದAತೆ ತಡೆಯಲು, ಅವರ ಮನೆಗಳಿಗೆ ತೆರಳಿ ಆಧಾರ್ ಕಾರ್ಡ್ ಮಾಡಿಕೊಡುವಂತೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ನಿರ್ದೇಶನ ನೀಡಿದರು.

ಅವರು ಶುಕ್ರವಾರ ಅಪರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಆಧಾರ್ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂಚೆ ಇಲಾಖೆಯಲ್ಲಿ ಆಧಾರ್ ಕಾರ್ಡ್ ಮಾಡುವ ಸೌಲಭ್ಯವನ್ನು ಈಗಾಗಲೇ ಒದಗಿಸಲಾಗಿದ್ದು ಇದಕ್ಕಾಗಿ ಪ್ರತ್ಯೇಕ ಕಿಟ್ ಗಳನ್ನು ನೀಡಲಾಗಿದೆ. ಅಂಚೆ ಇಲಾಖೆಯ ಸಿಬ್ಬಂದಿಗಳು ಅಂಚೆ ವಿತರಣೆಗೆ ಮನೆ ಮನೆಗೆ ಭೇಟಿ ನೀಡುತ್ತಿದ್ದು, ಅವರ ಮೂಲಕವೇ ಜಿಲ್ಲೆಯಲ್ಲಿ ಹಾಸಿಗೆ ಪೀಡಿತರಿಗೆ ಆಧಾರ್ ಕಾರ್ಡ್ ಮಾಡಿ ಕೊಡುವ ವ್ಯವಸ್ಥೆ ಮಾಡುವಂತೆ ತಿಳಿಸಿದ ಅಪರ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿನ ಬ್ಯಾಂಕ್ ಗಳಲ್ಲಿ ಕೆಲವೇ ಶಾಖೆಗಳಲ್ಲಿ ಹೊಸ ಆಧಾರ್ ಕಾರ್ಡ್, ನವೀಕರಣ ಮತ್ತು ತಿದ್ದುಪಡಿ ಮಾಡುವ ಕಾರ್ಯವನ್ನು ಮಾಡುತ್ತಿದ್ದು, ಇವುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿನ ಶಾಖೆಗಳಲ್ಲಿ ವಿಸ್ತರಿಸುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ 98000 ಕ್ಕೂ ಅಧಿಕ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವ ಕಾರ್ಯವು ಬಾಕಿ ಇದ್ದು ಇವುಗಳಿಗೆ ಆಧಾರ್ ಜೋಡಣೆ ಮಾಡುವ ಕಾರ್ಯವನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಹಾಗೂ ಆಧಾರ್ ಕಾರ್ಡ್ಗಳಲ್ಲಿ ಬರುವ ವಿವಿಧ ರೀತಿಯ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಆಧಾರ್‌ನ ಸಹಾಯಕ ಮೆನೇಜರ್‌ಗೆ ಸೂಚಿಸಿದರು. ಆಧಾರ್ ಕಾರ್ಡ್ನ್ನು ಅಪ್ ಡೇಟ್ ಮಾಡುವ ಕುರಿತಂತೆ ಆಧಾರ್ ಕೇಂದ್ರದಿAದ ಮೊಬೈಲ್‌ಗಳಿಗೆ ಯಾವುದೇ ರೀತಿಯ ಲಿಂಕ್ ಸಂದೇಶಗಳನ್ನು ಕಳಹಿಸುವುದಿಲ್ಲ, ಸಾರ್ವಜನಿಕರು ತಮ್ಮ ಮೊಬೈಲ್‌ಗಳಿಗೆ ಇಂತಹ ಸಂದೇಶ ಬಂದರೆ ಯಾವುದೇ ಕಾರಣಕ್ಕೂ ಲಿಂಕ್‌ನ್ನು ಒತ್ತದಂತೆ ಎಚ್ಚರದಿಂದಿರಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.

ನೀಟ್ ಪರೀಕ್ಷೆಗೆ ಹಾಜರಾಗುವ ವಿ ದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ನಲ್ಲಿನ ಸಮಸ್ಯೆಗಳಿದ್ದರೇ ನೇರವಾಗಿ ಆಧಾರ್ ಪೋರ್ಟ್ಲ್‌ನಲ್ಲಿ ಅವರೇ ಅಗತ್ಯ ದಾಖಲೆಗಳನ್ನು ನೀಡಿ, 10 ದಿನಗಳ ಒಳಗೆ ನವೀಕರಣಗೊಂಡ ಕಾರ್ಡ್ ಪಡೆಯಬಹುದಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಲೀಡ್ ಬ್ಯಾಂಕ್ ಮೆನೇಜರ್ ಭಾರತಿ ವಸಂತ್, ಯುಐಡಿಎಐ ಬೆಂಗಳೂರು ಕೇಂದ್ರದ ಸಹಾಯಕ ಮೆನೇಜರ್ ಚೇತನ್, ಜಿಲ್ಲಾ ಆಧಾರ್ ಸಮಾಲೋಚಕ ಮಹಾಬಲೇಶ್ವರ ದೇಸಾಯಿ, ಅಂಚೆ ಇಲಾಖೆಯ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.