ಮಂಡ್ಯ: ಕಳೆದ 25 ದಿನದ ಹಿಂದೆ ಬೆಂಗಳೂರು-ಮೈಸೂರು ಹೆದ್ದಾರಿ ಪರಿಶೀಲನೆ ಮಾಡಲಾಗಿತ್ತು. ಆ ವೇಳೆ ಕಂಡುಬಂದಿದ್ದ ಸಮಸ್ಯೆಗಳಲ್ಲಿ ಒಂದಷ್ಟು ಬಗೆಹರಿಸಲಾಗಿದೆ. ಅಂತೆಯೇ ಇನ್ನೂ ಒಂದಷ್ಟು ನಿಯಮ ಮೂಲಕ ಮಾದರಿ ಹೆದ್ದಾರಿಯನ್ನಾಗಿಸಲು ಕ್ರಮ ವಹಿಸಲಾಗುವುದು ಎಂದು ಎಡಿಜಿಪಿ ಅಲೋಕ್‌ಕುಮಾರ್ ಹೇಳಿದರು.
ಮಂಡ್ಯ ನಗರದ ಹೊರವಲಯ ಹಾಗೂ ಶ್ರೀರಂಗಪಟ್ಟಣ ಗಣಂಗೂರು ಟೋಲ್‌ಫ್ಲಾಜಾ ಬಳಿ ಮಂಗಳವಾರ ಹೆದ್ದಾರಿ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಪರಿಶೀಲನೆ ನಡೆಸಿದಾಗ ಸ್ಥಳೀಯರು ಸಮಸ್ಯೆಗಳನ್ನು ಹೇಳಿದ್ದರು. ಅದಾದ ಬಳಿಕ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಪರಿಣಾಮ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಇನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಎಂದರು.
ಸಧ್ಯಕ್ಕೆ ತೆಗೆದುಕೊಂಡಿರುವುದು ತಾತ್ಕಾಲಿಕ ಕ್ರಮವಾಗಿದ್ದು, ಶಾಶ್ವತವಾಗಿ ಸಮಸ್ಯೆ ಬಗೆಹರಿಸಬೇಕಿದೆ. ಅಪಘಾತರಹಿತ ಹೆದ್ದಾರಿಯನ್ನಾಗಿಸಬೇಕಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ. ಸವಾರರಿಗೆ ದಂಡ ವಿಧಿಸುವುದೇ ಮುಖ್ಯವಲ್ಲ. ಬದಲಿಗೆ ಜಾಗೃತಿ ಮೂಡಿಸಬೇಕು. ಅವರು ಸಂಚಾರದ ನಿಯಮ ಪಾಲಿಸುವಂತೆ ಮಾಡಬೇಕು. ಎಂಟ್ರಿ, ಎಕ್ಸಿಟ್ ಸೇರಿದಂತೆ ಅಗತ್ಯ ಮಾಹಿತಿಯುಳ್ಳ ಜಾಗೃತಿ ನಾಮಫಲಕ ಅಳವಡಿಸಬೇಕಿದೆ. ಇನ್ನು ಕಳೆದ ವಾರ ತಜ್ಞರ ತಂಡವೂ ಪರಿಶೀಲನೆ ನಡೆಸಿದ್ದು, ಅವರು ಕೂಡ ಒಂದು ವರದಿ ಸಲ್ಲಿಸಲಿದ್ದಾರೆ. ಅದನ್ನು ನೋಡಿ ಇನ್ನಷ್ಟು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಎ.ಎಸ್.ತಿಮಯ್ಯ, ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕ ಜೆಸ್ವಾಲ್ ಇತರರಿದ್ದರು.