ಜಿಲ್ಲೆ

ಹತ್ತರಗಿ ಕಲ್ಲು ತೂರಾಟ: ತನಿಖೆ ಆರಂಭಿಸಲಾಗಿದೆ: ಎಡಿಜಿಪಿ ಹಿತೇಂದ್ರ ಹೇಳಿಕೆ

ಡಿ.ವಿ. ಕಮ್ಮಾರ

ಬೆಳಗಾವಿ: ಹತ್ತರಗಿ ಬಳಿ ಉದ್ದೇಶಪೂರ್ವಕವಾಗಿ ಕಲ್ಲು ತೂರಾಟವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಸಂಬಂಧ ಯಮಕನಮರಡಿ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ ಮಹಾನಿರ್ದೇಶಕ(ಎಡಿಜಿಪಿ) ಆರ್.ಹಿತೇಂದ್ರ ಹೇಳಿದರು.

ಹತ್ತರಗಿ ಕಲ್ಲು ತೂರಾಟ ಘಟನೆಯಲ್ಲಿ ಗಾಯಗೊಂಡು ಇಲ್ಲಿನ ಕೆಎಲ್‌ಇ ಸೊಸೈಟಿಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಸಿಬ್ಬಂದಿ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯ ಕಲ್ಲು ತೂರಾಟದಲ್ಲಿ ನಮ್ಮ ಇಲಾಖೆಯ 11 ಜನ ಸಿಬ್ಬಂದಿ ಗಾಯಗೊಂಡಿದ್ದರು. ಆ ಪೈಕಿ ಒಬ್ಬರ ಕೈ ಮುರಿದಿದೆ. ಇನ್ನೊಬ್ಬರ ತಲೆಗೆ ಪೆಟ್ಟಾಗಿದೆ. ಇವರಿಬ್ಬರಿಗೆ ಮಾತ್ರ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿಸಿದರು.

ಗುಂಪಿನಲ್ಲಿ ಎಲ್ಲರೂ ಕಲ್ಲು ಹೊಡೆದರು ಎಂದು ಹೇಳಲಾಗದು. ಅಲ್ಲಿರುವ ಸಿಸಿಟಿವಿ ಹಾಗೂ ಇತರೆ ವಿಡಿಯೋಗಳ ಪರಿಶೀಲನೆ ನಡೆದಿದೆ. ರೈತರು ಗಲಾಟೆ ಮಾಡಿದ್ದಾರೆ ಎನ್ನಲಾಗದು. ನಿಜವಾಗಿ ಗಲಾಟೆ ಮಾಡಿದವರನ್ನು ಗುರುತಿಸಿ ಅಂಥವರನ್ನು ಮಾತ್ರ ಬಂಧಿಸುತ್ತೇವೆ ಸೂಚಿಸಿದ್ದೇನೆ. ಮುಂಚಿತವಾಗಿಯೇ ಹೋರಾಟವನ್ನು ಸೂಕ್ಷ್ಮವಾಗಿ ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿತ್ತು. ಎಷ್ಟೋ ಪೊಲೀಸರಿಗೆ ನಿನ್ನೆ ಲಾಠಿ ಸಹ ಕೊಟ್ಟಿರಲಿಲ್ಲ. ತಾಳ್ಮೆಯಿಂದಲೇ ಘಟನೆಯನ್ನು ನಮ್ಮ ಸಿಬ್ಬಂದಿ ನಿರ್ವಹಿಸಿದ್ದಾರೆ. ಘಟನೆಯಲ್ಲಿ 4 ಕೆಎಸ್‌ಆರ್‌ಟಿಸಿ ಬಸ್ ಮತ್ತು ನಮ್ಮ ಇಲಾಖೆಯ ಎರಡು ವಾಹನ ಕೆಲವು ಖಾಸಗಿ ವಾಹನಗಳ ಗಾಜುಗಳಿಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಉಪ ಪೊಲೀಸ್ ಆಯುಕ್ತ ನಾರಾಯಣ ಬರಮನಿ ಇತರರಿದ್ದರು.