ಚಿಕ್ಕಮಗಳೂರು: ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಬಾಲ್ಯ ವಿವಾಹ ತಡೆಗಟ್ಟಲು ಕಾನೂನುಗಳನ್ನು ಸಮರ್ಪಕವಾಗಿ ಪಾಲಿಸಬೇಕು. ಜತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, ಬಾಲ್ಯ ವಿವಾಹ ಸಮನ್ವಯ ಮತ್ತು ಮಹಿಳೆಯರ ಮತ್ತು ಮಕ್ಕಳ ಸಾಗಣೆ ತಡೆ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು. ಮಹಿಳೆಯರು, ಮಕ್ಕಳು ಕಾಣೆಯಾಗುತ್ತಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರುಗಳು ಬರುತ್ತಲ್ಲೇ ಇರುತ್ತವೆ. ಇದಕ್ಕೆ ಮೂಲ ಕಾರಣ ಏನು ಎಂಬುದರ ಮಾಹಿತಿ ಪಡೆದುಕೊಂಡಾಗ ಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ. ಕೌಟುಂಬಿಕ ದೌರ್ಜನ್ಯದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಸರ್ಕಾರೇತರ ಸಂಸ್ಥೆಗಳು ಕಾನೂನು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ಮಾಹಿತಿ ಅಥವಾ ಅರಿವಿನ ಕೊರತೆಯಿಂದಲೋ ಪಾಲಕರು ಮಕ್ಕಳನ್ನು ಬಾಲ್ಯ ವಿವಾಹ ಮಾಡಿಸಲು ಮುಂದಾಗುತ್ತಾರೆ. ಜಿಲ್ಲೆಯಲ್ಲಿ ಹಳ್ಳಿಗಳು ಬಹಳ ದೂರ ದೂರ ಇರುವುದರಿಂದ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸಾಧ್ಯವಾಗಿಲ್ಲ. ಇನ್ನಾದರೂ ಬಾಲ್ಯ ವಿವಾಹ ನಡೆಯದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬಾಲ್ಯ ವಿವಾಹಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ 23 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, 23 ಮಕ್ಕಳನ್ನು ಪಾಲಕರ ವಶಕ್ಕೆ ಒಪ್ಪಿಸಲಾಗಿದೆ. 2 ಪ್ರಕರಣದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜಾನಾಯಕ್ ಮಾಹಿತಿ ನೀಡಿದರು. ಗ್ರಾಪಂಗಳಿಂದ ನಡೆಯುವ ಮಕ್ಕಳ ವಿಶೇಷ ಗ್ರಾಮಸಭೆಗಳಲ್ಲಿ ಬಾಲ್ಯ ವಿವಾಹ ಮತ್ತು ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲ ಪುರೋಹಿತ, ಅರ್ಚಕರು ಹಾಗೂ ಕಲ್ಯಾಣ ಮಂಟಪಗಳಲ್ಲಿ ವಧು, ವರರ ವಯಸ್ಸನ್ನು ಖಾತ್ರಿ ಪಡಿಸಿಕೊಂಡ ನಂತರವೇ ಕಲ್ಯಾಣ ಮಂಟಪ ನೀಡಲು ನಿರ್ದೇಶನ ನೀಡಲಾಗಿದೆ. ಬಾಲ್ಯ ವಿವಾಹ ತಡೆಯುವ ಸಂಬಂಧ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ದೂರು ನೀಡಬಹುದು ಎಂದರು. ಕಾಫಿ ತೋಟಗಳಿಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಕೆಲಸಕ್ಕೆ ಬರುವ ಕಾರ್ಮಿಕರ ಮಾಹಿತಿಯನ್ನು ಕಾರ್ಮಿಕ ಇಲಾಖೆ ಸಂಗ್ರಹಿಸಬೇಕು. ಈ ಕಾಯ್ದೆಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು. ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಸ್.ಸೋಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್ಥ್ ಬಾಬು ಇದ್ದರು.