ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯರಾದ ಜಿಲ್ಲಾಧಿಕಾರಿ ದಿವ್ಯ ಪ್ರಭು ನಿರ್ದೇಶನದ ಮೇರೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಅಪರ ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಜರುಗಿತು.
ಅಪರ ಜಿಲ್ಲಾಕಾರಿ ಗೀತಾ ಸಿ.ಡಿ. ಮಾತನಾಡಿ, ಏ.10 ರಿಂದ ತಾಲೂಕಿನ ನಿಗದಿ ಗ್ರಾಪಂ ವ್ಯಾಪ್ತಿಯ ಬೆನಕನಕಟ್ಟಿ ಗ್ರಾಮ ಹಾಗೂ ರಾಮಾಪುರ ಗ್ರಾಮಕ್ಕೆ ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕಲಟಗಿ ತಾಲೂಕಿನ ತಾವರಗೇರೆ ಮತ್ತು ಬೇಗೂರ ಗ್ರಾಮದಲ್ಲಿ ನೀರು ಪೂರೈಕೆಗೆ ಬಾಡಿಗೆ ಆಧಾರದಲ್ಲಿ ಪಡೆದಿರುವ ಖಾಸಗಿ ಬೋರವೆಲ್ಗಳಿಗೆ ಪೈಪ್ಲೈನ್ ಅಳವಡಿಕೆಗೆ ಜಿಲ್ಲಾಧಿಕಾರಿ ಅನುಮೋದನೆ ಮೇರೆಗೆ ಕ್ರಮವಹಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಮುಂದಿನ 7 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನು ಲಭ್ಯವಿದೆ. ಕಲಟಗಿ, ಕುಂದಗೋಳ ಮತ್ತು ಧಾರವಾಡ ತಾಲೂಕಿನ ಕೆಲ ಹೋಬಳಿಗಳಲ್ಲಿ ರೈತರಿಂದ ಮೇವು ಬೇಡಿಕೆ ಇದ್ದು, ಈಗಾಗಲೇ ಧಾರವಾಡ ಎಪಿಎಂಸಿಯಿಂದ 19 ಜನ ರೈತರಿಂದ 27.78 ಟನ್ ಹಾಗೂ ಕಲಟಗಿ ಎಪಿಎಂಸಿಯಿಂದ 35 ಜನ ರೈತರು 23.14 ಟನ್ ಮೇವು ಖರೀದಿಸಿದ್ದಾರೆ. ಕಲಟಗಿ ಮತ್ತು ಧಾರವಾಡ ತಹಸೀಲ್ದಾರ ಹೆಚ್ಚಿನ ಮೇವು ಪೂರೈಕೆಗೆ ಪ್ರಸ್ತಾವ ಸಲ್ಲಿಸಿದ್ದು, ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಕ್ರಮವಹಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಆರಂಭಿಸಿರುವ ಎಲ್ಲ ಮೇವು ಬ್ಯಾಂಕ್ಗಳಿಂದ ಈವರೆಗೆ ರೈತರು 75.25 ಟನ್ ಮೇವು ಖರೀದಿಸಿದ್ದಾರೆ. ಇನ್ನೂ 33.35 ಟನ್ ಮೇವು ದಾಸ್ತಾನು ಲಭ್ಯವಿದೆ. ಮುಂಗಾರುವ ಮಳೆ ಜಿಲ್ಲೆಯಲ್ಲಿ ಆರಂಭವಾಗಿದ್ದು, 3&4 ದಿನಗಳಲ್ಲಿ ಕಲಟಗಿ ಮತ್ತು ಹುಬ್ಬಳ್ಳಿ ತಾಲೂಕಿನ ಕೆಲ ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲಾಗಿದೆ. ಉಳಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಚದುರಿದಂತೆ ಅಲ್ಪ ಪ್ರಮಾಣದ ಮಳೆ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಳೆ ಆಗುವ ಮೂನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ ಎಂದರು.
ಜಿಪಂ ಉಪ ಕಾರ್ಯದಶಿರ್ ವಿಜಯಕುಮಾರ ಆಜೂರ, ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಬಿ.ಎಸ್., ಹೆಸ್ಕಾಂ ಕಾರ್ಯಪಾಲಕ ಅಭಿಯಂತರ ಎಂ.ಎಂ.ನದಾ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ರವಿ.ಸಾಲಿಗೌಡರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಆರ್.ಎಂ.ಸೊಪ್ಪಿಮಠ, ತಹಸೀಲ್ದಾರರು, ಇತರರು ಇದ್ದರು.