ದೇವದುರ್ಗ: ಒಳಮೀಸಲಾತಿ ಜಾರಿ ಸಂಬಂಧ ರಾಜ್ಯ ಸರ್ಕಾರ ಮೇ 5ರಂದು ಪರಿಶಿಷ್ಟ ಜಾತಿಗಳ ಗಣತಿ ಆರಂಭ ಮಾಡಿದ್ದು, ತಾಲೂಕು ಸೇರಿ ಜಿಲ್ಲೆಯ ಎಲ್ಲ ತಾಂಡಾ, ದೊಡ್ಡಿಯಲ್ಲಿರುವ ಲಂಬಾಣಿ ಸಮಾಜದ ಜನರು ಹೆಸರು ನೋಂದಾಯಿಸಬೇಕು ಎಂದು ಗೋರಸೇನೆ ಸಂಘಟನೆ ಜಿಲ್ಲಾಧ್ಯಕ್ಷ ರಮೇಶ ರಾಠೋಡ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು. ಮನೆಮನೆಗೆ ಬರುವ ಅಧಿಕಾರಿಗಳಿಗೆ ಸಮಾಜದ ಮುಖಂಡರು ಸಮರ್ಪಕ ಮಾಹಿತಿ ನೀಡಬೇಕು. ಕಾಲಂ ನಂ.17ರಲ್ಲಿ ಲಂಬಾಣಿ ಬಂಜಾರ ಎಂದು ಕಡ್ಡಾಯವಾಗಿ ಬರೆಸಬೇಕು. ಗೋರ ಸಂಘಟನೆ 30ವರ್ಷಗಳ ಹೋರಾಟದ ಫಲ ಇಂದು ದೊರೆತಿದೆ.
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಜಾರಿಗೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಜಾತಿ ಸಮೀಕ್ಷೆಗೆ ತೆರಳುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮರ್ಪಕ, ವಸ್ತುನಿಷ್ಠ ವರದಿ ಮಾಡಬೇಕು. ಲಂಬಾಣಿ ಸಮಾಜದ ಜನರು ದುಡಿಯಲು ಗುಳೆ ಹೋಗುತ್ತಿದ್ದು ವಲಸೆ ಹೋದವರ ಬಗ್ಗೆ ವರದಿ ಮಾಡುವಾಗ ಖಚಿತ ಮಾಹಿತಿ ಪಡೆಯಬೇಕು ಎಂದರು.
ಮುಖಂಡರಾದ ಸೀತಾರಾಮ ಚವ್ಹಾಣ್, ಜೀವಾ ರಾಠೋಡ್, ಸೋಮು ಜಾಧವ್, ರಾಜು ರಾಠೋಡ್, ತಿಮ್ಮಣ್ಣ ಪವಾರ್, ಕುಮಾರ್ ರಾಠೋಡ್, ನೀಲಪ್ಪ ರಾಠೋಡ್, ನರೇಶ್ ಜಾಧವ್, ದೇವೇಂದ್ರಪ್ಪ ರಾಠೋಡ್ ಇದ್ದರು.