ಜಿಲ್ಲೆ

ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮಕೈಗೊಳ್ಳಿ

ಲಿಂಗಸುಗೂರು: ಅನಿಯಮಿತ ವಿದ್ಯುತ್ ಕಡಿತದಿಂದ ಸಾರ್ವಜನಿಕರು ಪರದಾಡುವಂತಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜೆಸ್ಕಾಂ ಎಇಇ ಕೆಂಚಪ್ಪಗೆ ಕರ್ನಾಟಕ ರಕ್ಷಣಾ ವೇದಿಕೆ (ಶೆಟ್ಟಿ ಬಣ) ಕಾರ್ಯಕರ್ತರು ಸೋಮವಾರ ಮನವಿ ಸಲ್ಲಿಸಿದರು.

ಆರ್‌ಟಿಪಿಎಸ್, ಜಲ ವಿದ್ಯುತ್ ಮತ್ತು ಪವನ ಶಕ್ತಿ ಮೂಲಕ ವಿದ್ಯುತ್ ಉತ್ಪಾದಿಸಿ ಇಡೀ ರಾಜ್ಯಕ್ಕೆ ಸರಬರಾಜು ಮಾಡುವ ರಾಯಚೂರು ಜಿಲ್ಲೆಯಲ್ಲಿ ಅನಗತ್ಯ ವಿದ್ಯುತ್ ಕಡಿತ ಮಾಡುತ್ತಿರುವುದು ವಿಷಾದನೀಯ. ತಾಲೂಕಿನಲ್ಲಿ ವೇಳೆಯ ನಿಗದಿಯಿಲ್ಲದೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ದೂರಿದರು.ಸರ್ಕಾರ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಿದರೆ, ಅಧಿಕಾರಿಗಳು ವಿದ್ಯುತ್ ಕಡಿತ ಮಾಡುವ ಮೂಲಕ ಕತ್ತಲು ಭಾಗ್ಯ ನೀಡುತ್ತಿದ್ದಾರೆ. ಕೂಡಲೇ ಅನಿಯಮಿತ ವಿದ್ಯುತ್ ಕಡಿತಕ್ಕೆ ಕಡಿವಾಣ ಹಾಕಿ ಸಮರ್ಪಕ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.