ಗೋಕರ್ಣ: ಜಿಲ್ಲಾ ಶವಾಗಾರದಲ್ಲಿ ಇಡಲಾಗಿದ್ದ ಮೃತ ವ್ಯಕ್ತಿಯ ವಿಳಾಸವನ್ನು ಪಾನ್‌ಕಾರ್ಡ್ ಸಹಾಯದಿಂದ ಪೊಲೀಸರು ಪತ್ತೆ ಹಚ್ಚಿ ಶವವನ್ನು ವಾರಸುದಾರರಿಗೆ ಒಪ್ಪಿಸದ ಘಟನೆ ಶನಿವಾರ ನಡೆದಿದೆ.
ಹತ್ತಿರದ ಹಿರೇಗುತ್ತಿಯಲ್ಲಿ ಟೇಲರಿಂಗ್ ವೃತ್ತಿ ನಡೆಸುತ್ತಿದ್ದ ರಮೇಶ ಮಾಲತ್ಕರ್(58) ಎನ್ನುವವರು ಜೂ.26ರಂದು ಅಸ್ವಸ್ಥರಾಗಿ ಕುಮಟಾ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವಿಗೀಡಾಗಿದ್ದರು.
ಹಿಂದೆ ಹಿರೇಗುತ್ತಿಯ ದೇವರಬೋಳೆಯಲ್ಲಿನ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಸೂಪರ್‌ವೈಸರ್ ಆಗಿದ್ದರು. ಕರೋನಾ ವೇಳೆ ಫ್ಯಾಕ್ಟರಿ ಬಂದ್ ಆದ ಕಾರಣ ಜೀವನ ನಿರ್ವಹಣೆಗೆ ಹೊಲಿಗೆ ಕೆಲಸ ಪ್ರಾರಂಭಿಸಿದ್ದರು. ಟೇಲರಿಂಗ್ ಮಾಡಿ ಹಿರೇಗುತ್ತಿಯಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದ ರಮೇಶ ಯಾರಿಗೂ ತಮ್ಮ ಮೂಲವನ್ನು ತಿಳಿಸಿರಲಿಲ್ಲ. ಇವರ ಮೂಲ ವಿಳಾಸ ದೊರೆಯದ ಹಿನ್ನೆಲೆಯಲ್ಲಿ ಶವವನ್ನು ಜಿಲ್ಲಾ ಶವಾಗಾರದಲ್ಲಿ ಇಡಲಾಗಿತ್ತು. ಅವರ ಬಳಿಯಿದ್ದ ಮೊಬೈಲ್‌ಫೋನ್ ಮತ್ತು ಬ್ಯಾಂಕ್ ಪಾಸ್‌ಬುಕ್‌ಗಳಲ್ಲಿ ಅವರು ಹಿರೇಗುತ್ತಿಯ ವಿಳಾಸ ನೀಡಿದ್ದರಿಂದ ವಾರಸುದಾರರನ್ನು ಹುಡುಕುವುದು ಪೊಲೀಸರಿಗೆ ಸಮಸ್ಯೆಯಾಗಿತ್ತು. ಈ ನಡುವೆ ದೊರೆತ ಅವರ ಪಾನ್‌ಕಾರ್ಡ್ ಮೂಲಕ ಐಟಿ ಇಲಾಖೆಯ ಸಹಾಯದಿಂದ ಸ್ಥಳೀಯ ಪೊಲೀಸರು ಮೃತರ ನಿಖರ ವಾಸ ಸ್ಥಾನವನ್ನು ಪತ್ತೆ ಮಾಡುವಲ್ಲಿ ಸಫಲರಾದರು.
ಬೆಂಗಳೂರಿನ ಪೀಣ್ಯದಲ್ಲಿ ವಾಸಿಸುತ್ತಿದ್ದ ಮೃತರ ಕುಟುಂಬದವರನ್ನು ಸಂಪರ್ಕಿಸಿದ ಪೊಲೀಸರು, ಶನಿವಾರ ಜಿಲ್ಲಾ ಆಸ್ಪತ್ರೆಗೆ ಬಂದು ಶವವನ್ನು ಗುರುತಿಸಿದ ಅವರ ಕುಟುಂಬದವರಿಗೆ ಹಸ್ತಾಂತರಿಸಿದರು.