ಶಿವಮೊಗ್ಗ: ಸಮೀಕ್ಷೆಯು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಸಾಮಾಜಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿ ತಿಳಿಯಲು ಮಾಡಿರುವ ಗಣತಿ ಇದಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ನಾಲ್ಕೈದು ಶಿಕ್ಷಕರು ವಿರೋಧಿಸಿದ ಮಾತ್ರಕ್ಕೆ ಸಮೀಕ್ಷೆ ನಿಲ್ಲಿವುದಿಲ್ಲ. ಗಣತಿಯಲ್ಲಿ ಯಾವುದೇ ತೊಡಕುಗಳಿಲ್ಲ. ಇದ್ದಂತಹ ಸರ್ವರ್, ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಕಾಲಮಿತಿಯಲ್ಲಿ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಎಲ್ಲ ನಾಗರಿಕರಿಗೂ ಸಮಾನತೆ ಒದಗಿಸುವ ದೃಷ್ಟಿಯಿಂದ ಈ ಮಹತ್ವದ ಸಮೀಕ್ಷೆ ಕೈಗೊಳ್ಳಲಾಗಿದೆ. ಈ ಸಮೀಕ್ಷೆಗೆ ಎಲ್ಲ ಶಿಕ್ಷಕರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಕೆಲವೇ ಕೆಲವು ಪ್ರದೇಶಗಳಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ನಿವಾರಿಸಲು ಸಮೀಕ್ಷೆಗಾಗಿ ಕೆಲವು ಕಡೆ ಹೆಚ್ಚುವರಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಪ್ರತಿ ಶಿಕ್ಷಕರಿಗೆ ದಿನಕ್ಕೆ ಹತ್ತು (10) ಮನೆಗಳ ಗುರಿ ನೀಡಲಾಗಿದೆ ಎಂದರು.
ಸಾಗರವನ್ನು ಜಿಲ್ಲಾ ಕೇಂದ್ರವನ್ನಾಗಿಸುವ ಬಗ್ಗೆ ಅಲ್ಲಿನ ನಾಗರಿಕರು ಹೋರಾಟ ನಡೆಸುತ್ತಿದ್ದಾರೆ. ಜಿಲ್ಲಾ ಕೇಂದ್ರವಾಗಿಸುವ ಕುರಿತು ಹೋರಾಟ ಮಾಡುವುದು ತಪ್ಪಲ್ಲ. ಈ ನಿಟ್ಟಿನಲ್ಲಿ ನಾವು ಕೂಡ ಜನರ ಹೋರಾಟದ ಜತೆಗಿರುತ್ತೇವೆಂದು ಮಧು ಬಂಗಾರಪ್ಪ ಬೆಂಬಲ ವ್ಯಕ್ತಪಡಿಸಿದರು.