ಮೈಸೂರು: ಗ್ರಾಹಕರೊಬ್ಬರಿಂದ ಹೆಚ್ಚುವರಿ 12 ರೂ. ಪಡೆದ ಆರೋಪದ ಹಿನ್ನೆಲೆಯಲ್ಲಿ ಜೆಪಿ ನಗರದ ಮೋರ್ ಮಳಿಗೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 20 ಸಾವಿರ ರೂ. ಪರಿಹಾರ ಮೊತ್ತ ಪಾವತಿಸುವಂತೆ ವಿಧಿಸಿ ತೀರ್ಪು ನೀಡಿದೆ.
ಚಾಮುಂಡಿಪುರಂ ಒಂದನೇ ಮುಖ್ಯ ರಸ್ತೆಯ ನಿವಾಸಿ ಎಂ.ಕೆ. ರಮೇಶ್ ಜೆಪಿ ನಗರದ ಮೋರ್ ಮಳಿಗೆಯಲ್ಲಿ 30-08-2023 ರಂದು 4 ಸರ್ಫ್ ಎಕ್ಸೆಲ್ ಡಿಟರ್ಜೆಂಟ್ ಬಾರ್ ಖರೀದಿಸಿದ್ದರು. ಒಂದು ಡಿಟರ್ಜೆಂಟ್ ಬಾರ್‌ನ ಬೆಲೆ 35 ರೂ. ಎಂದು ನಮೂದಿಸಿತ್ತು. ಈ ಪ್ರಕಾರ 4 ಡಿಟರ್ಜೆಂಟ್ ಬಾರ್‌ಗೆ ಒಟ್ಟು 140 ರೂ. ಪಡೆಯಬೇಕಾಗಿತ್ತು. ಆದರೆ, ಮಳಿಗೆಯವರು 152 ರೂ. ಪಡೆದಿದ್ದರು. ಈ ಬಗ್ಗೆ ಮೋರ್ ಮಳಿಗೆಯವರನ್ನು ಪ್ರಶ್ನಿಸಿದಾಗ ಅವರಿಂದ ಸೂಕ್ತ ಉತ್ತರ ಬರಲಿಲ್ಲ.
ಈ ಹಿನ್ನೆಲೆಯಲ್ಲಿ 18-11-2023 ರಂದು ರಮೇಶ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋದರು. ಆ.20 ರಂದು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಎ.ಕೆ. ನವೀನ್ ಕುಮಾರಿ ಗ್ರಾಹಕರಿಂದ ಹೆಚ್ಚುವರಿ ಮೊತ್ತ ಪಡೆದಿರುವುದು ಸಾಬೀತು ಗೊಂಡ ಹಿನ್ನೆಲೆಯಲ್ಲಿ 20 ಸಾವಿರ ರೂ. ಪರಿಹಾರ ಮೊತ್ತ ಪಾವತಿಸುವಂತೆ ಮೋರ್ ಮಳಿಗೆಯ ವ್ಯವಸ್ಥಾಪಕರಿಗೆ ಆಯೋಗ ನಿರ್ದೇಶನ ನೀಡಿದೆ. ಅಲ್ಲದೆ, ಪ್ರಕರಣದ ಖರ್ಚು 5 ಸಾವಿರ ರೂ., ಹೆಚ್ಚುವರಿ ಮೊತ್ತ 12 ರೂ.ಗಳನ್ನು ಹಿಂತಿರುಗಿಸುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ.