ಜಿಲ್ಲೆ

ಹೆಚ್ಚುವರಿ ಹೊಣೆಗೆ ಪ್ರತ್ಯೇಕ ಸೌಲಭ್ಯ

ಎನ್.ವೆಂಕಟೇಶ್

ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆ 2ನೇ ಹಂತದ ಹೋರಾಟ

ಬಾಗೇಪಲ್ಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ 2024ರ ಸೆಪ್ಟಂಬರ್‌ನಲ್ಲಿ ಸರ್ಕಾರ ನೀಡಿದ್ದ ಭರವಸೆ ಈಡೇರದ ಹಿನ್ನಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ವೈ.ವೆಂಕಟೇಶ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಬಾಗೇಪಲ್ಲಿ ಮತ್ತು ಚೇಳೂರು ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಕರ್ತವ್ಯ ಬಹಿಷ್ಕರಿಸಿ ಹಮ್ಮಿಕೊಂಡಿರುವ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ಉದ್ದೇಶಿಸಿ ಮಂಗಳವಾರ ಮಾತನಾಡಿದರು.

ಬೇಡಿಕೆ ಈಡೇರಿಸುವಂತೆ 2024ರಲ್ಲಿ ಮುಷ್ಕರ ನಡೆಸಿದಾಗ ಸರ್ಕಾರ ಭರವಸೆ ನೀಡಿತ್ತು, ಆದರೆ, ಇಂದಿಗೂ ಭರವಸೆಗಳು ಈಡೇರಿಲ್ಲ. ಹಾಗಾಗಿ ರಾಜ್ಯ ಸಂಘದ ಕರೆಯಂತೆ 2ನೇ ಹಂತದ ಮುಷ್ಕರ ಆರಂಭಿಸಲಾಗಿದೆ. ಗ್ರಾಮ ಆಡಳಿತಾಧಿಕಾರಿಗಳ ಹಾಗೂ ಗ್ರಾಮ ಸಹಾಯಕರ 23 ಬೇಡಿಕೆಗಳನ್ನು ಈಡೇರಿಸುವಂತೆ ಬೇಡಿಕೆ ಇಟ್ಟಿದ್ದೇವೆ. ಕಂದಾಯ ವೃತ್ತಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚುವರಿಯಾಗಿ ಇ-ಪೌತಿ ಖಾತೆ, ಪಹಣಿಗಳಿಗೆ ಆಧಾರ್ ಸೀಡಿಂಗ್, ಬೆಳೆ ಸಮೀಕ್ಷೆ, ಪಿಎಂ ಕಿಸಾನ್ ವೆಬ್ ಆಪ್, ಕೃಷಿ ಗಣತಿ ಸೇರಿ ತಂತ್ರಾಂಶಗಳಿಂದ ಕೂಡಿದ ಹಲವು ಜವಾಬ್ದಾರಿ ನೀಡಿದ್ದಾರೆ, ಹೆಚ್ಚುವರಿ ಹೊಣೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಇದುವರೆಗೂ ಯಾವುದೇ ಪ್ರತ್ಯೇಕ ಸೌಲಭ್ಯ ಕಲ್ಪಿಸಿಲ್ಲ. ಲ್ಯಾಪ್‌ಟ್ಯಾಪ್ ನೀಡಿಲ್ಲ, ಕಂದಾಯ ವೃತ್ತದಲ್ಲಿ ವಸತಿ ಸೌಲಭ್ಯ ಇಲ್ಲ, ವೇತನ ಏರಿಕೆ ಘೋಷಣೆ ಮಾಡಿಲ್ಲ. ಆದರೂ ಇದುವರೆಗೆ ಎಲ್ಲ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದೇವೆ. ಅದೇರೀತಿ ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಒದಗಿಸಿಕೊಡುವ ಬೇಡಿಕೆ ಇಡಲಾಗಿದೆ ಎಂದರು.

ಸಂಘದ ಗೌರವಾಧ್ಯಕ್ಷ ಕಿರಣ್ ಕುಮಾರ್, ಕಾರ್ಯದರ್ಶಿ ಇ.ಕುಮಾರ್, ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಬಿ.ಸಿ.ನರಸಿಂಹಪ್ಪ, ಸಿಬ್ಬಂದಿ ವರ್ಗದವರಾದ ರಂಜಿತಾ, ಸುವರ್ಣ, ಕೀರ್ತಿ, ರೋಷಿಣಿ, ಗಂಗಾಧರ ಮೂರ್ತಿ, ಎನ್.ವೆಂಕಟೇಶ್, ಮಾಳಪ್ಪ, ಜಯರಾಮ್, ಶ್ರೀಧರ್, ಸಂತೋಷ್ ಕುಮಾರ್ ಮತ್ತಿತರರು ಇದ್ದರು.