ಬೆಟ್ಟದಪುರ: ಬೆಟ್ಟದಪುರದ ಖಾಸಗಿ (ಕೊಶಮಟ್ಟಂ) ಫೈನಾನ್ಸ್‌ನಲ್ಲಿ ಅಡವಿಟ್ಟ ಚಿನ್ನದ ಬಡ್ಡಿಯ ಮೊತ್ತವನ್ನು ಹೆಚ್ಚುವರಿಯಾಗಿ ಕಟ್ಟಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಸಿಬ್ಬಂದಿಯನ್ನು ರೈತ ಸಂಘದ ಮುಖಂಡ ಹರೀಶ್ ರಾಜೇ ಅರಸ್ ಬುಧವಾರ ಫೈನಾನ್ಸ್ ಕಚೇರಿಯಲ್ಲಿ ತರಾಟೆಗೆ ತೆಗೆದುಕೊಂಡರು.
ಬೆಟ್ಟದತುಂಗದ ಗ್ರಾಮದ ಮಹಿಳೆ ಪ್ರೀತಿ ರಾಜೇಅರಸ್ ಅಡವಿಟ್ಟ ಚಿನ್ನಕ್ಕೆ ಪ್ರತಿ ತಿಂಗಳು 5ನೇ ತಾರೀಖಿನಂದು ತಪ್ಪದೇ ಬಡ್ಡಿಯ ಮೊತ್ತವನ್ನು ಕಟ್ಟುತ್ತಿದ್ದರು. ಕಟ್ಟಿದ ಬಡ್ಡಿಯ ಮೊತ್ತವನ್ನು ಬೇರೊಬ್ಬರ ಖಾತೆಗೆ ಜಮಾ ಮಾಡಿ, ನೀವು ಬಡ್ಡಿ ಕಟ್ಟಿಲ್ಲ ಎಂದು ವಾಗ್ವಾದಕ್ಕೆ ಇಳಿದು, ಮಹಿಳೆ ಎಂಬುದು ಕಾಣದೆ ಏಕವಚನದಲ್ಲಿ ನಿಂದಿಸಿರುವುದು, ಎಷ್ಟರಮಟ್ಟಿಗೆ ಸರಿ ಇದೆ ಎಂದು ಅವರು ಸಿಬ್ಬಂದಿಯನ್ನು ಪ್ರಶ್ನಿಸಿದರು.
ಪ್ರೀತಿ ರಾಜೇಅರಸ್ ಮಾತನಾಡಿ, ಅಡವಿಟ್ಟ ಚಿನ್ನಕ್ಕೆ ಪ್ರತಿ ತಿಂಗಳು ತಪ್ಪದೆ ಬಡ್ಡಿಯ ಹಣವನ್ನು ಪಾವತಿಸಿದ್ದೇನೆ, ಚಿನ್ನ ಬಿಡಿಸಿಕೊಳ್ಳುವಾಗ ಹೆಚ್ಚುವರಿ ಹಣ ಪಡೆಯುತ್ತಿರುವುದು ಏಕೆ ಎಂದು ಕೇಳಿದ್ದಕ್ಕೆ, ನನಗೆ ನಿಂದಿಸಿದಲ್ಲದೆ, ಸಿಬ್ಬಂದಿ ನನ್ನ ಮೇಲೆ ರೇಗಾಡಿದ್ದಾರೆ, ನಾವು ಕಷ್ಟದ ಸಮಯದಲ್ಲಿ ಅನುಕೂಲವಾಗುತ್ತದೆ ಎಂದು ಬಂದಿದ್ದೇವೆ. ಆದರೆ, ಇವರು ಈ ರೀತಿ ಕೆಲಸ ಮಾಡಿದ್ದಾರೆ ಎಂದು ದೂರಿದರು.
ಶಾಖೆಯ ಮುಖ್ಯ ವ್ಯವಸ್ಥಾಪಕ ಚಂದ್ರು ಪ್ರತಿಕ್ರಿಯಿಸಿ, ಸಿಬ್ಬಂದಿ ಕಣ್ತಪ್ಪಿನಿಂದ ಬೇರೊಂದು ಖಾತೆಗೆ ಹಣ ವರ್ಗಾವಣೆಯಾಗಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಅದನ್ನು ಸರಿಪಡಿಸಿ, ಇನ್ನು ಮುಂದೆ ಯಾವುದೇ ತೊಂದರೆಗಳಾಗದಂತೆ ಕ್ರಮವಹಿಸಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಗಿರಿಗೌಡ, ಟಿ.ಡಿ. ರಾಜೇಅರಸ್, ನವೀನ್ ರಾಜೇಅರಸ್, ನಂಜುಂಡ, ಸಂತೋಷ್, ಹರೀಶ್, ಸ್ವಾಮಿ ಇದ್ದರು.