ಜಿಲ್ಲೆ

ಬೆಂಗಳೂರು-ಕಲಬುರಗಿ ವಂದೇ ಭಾರತ್‌ ಎಕ್ಸ್​ಪ್ರೆಸ್ ರೈಲಿಗೆ ಯಾದಗಿರಿ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ; ಸಚಿವ ವಿ. ಸೋಮಣ್ಣ ಚಾಲನೆ

ಬೆಂಗಳೂರು: ಎಸ್‌.ಎಂ.ವಿ.ಟಿ. ಬೆಂಗಳೂರು-ಕಲಬುರಗಿ ವಂದೇ ಭಾರತ್‌ ಎಕ್ಸ್​ಪ್ರೆಸ್​ ರೈಲಿಗೆ ಯಾದಗಿರಿ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಿಂದ ವಿಡಿಯೋ ಲಿಂಕ್‌ ಮೂಲಕ ಶನಿವಾರ ರೈಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಹಸಿರು ನಿಶಾನೆ ತೋರಿದರು.

ಬಳಿಕ ಮಾತನಾಡಿ, ವಂದೇ ಭಾರತ್‌ ರೈಲು ಸೇವೆ ಯಾದಗಿರಿ ಜಿಲ್ಲೆಗೆ ದೊರೆತಿರುವುದರಿಂದ ಜಿಲ್ಲೆಯ ಜನರಿಗೆ ಇದೊಂದು ಸಂತಸದ ದಿನವಾಗಿದೆ. ಸ್ವದೇಶಿ ತಂತ್ರಜ್ಞಾನದ ವಂದೇ ಭಾರತ್‌ ರೈಲು ವಿಶ್ವ ದರ್ಜೆಯ ವೈಶಿಷ್ಟ್ಯಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸುವುದರ ಜತೆಗೆ, ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್‌ ಮೋಹನ್‌, ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಪರೀಕ್ಷಿತ್‌ ಮೋಹನ್ಪೂರಿಯಾ, ಆಶುತೋಷ್‌ ಮಾಥುರ್‌ ಮತ್ತಿತರ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

  • ಯಾದಗಿರಿ ನಿಲ್ದಾಣದಲ್ಲಿ ವಂದೇ ಭಾರತ್‌ ಎಕ್ಸ್​​ಪ್ರೆಸ್‌ ನಿಲುಗಡೆಯ ವಿಶೇಷತೆಗಳು
  • ಇದು ಬೆಂಗಳೂರಿಗೆ ಪ್ರಯಾಣಿಸಲು ಯಾದಗಿರಿ ನಿಲ್ದಾಣದಿಂದ ಮೊದಲ ವಂದೇ ಭಾರತ್ ಎಕ್ಸ್​ಪ್ರೆಸ್
  • ಕಲಬುರಗಿಯಿಂದ ಬೆಂಗಳೂರಿಗೆ ಹೊರಡುವ ರೈಲು ಬೆಳಿಗ್ಗೆ 5.55ಕ್ಕೆ ಯಾದಗಿರಿಯಿಂದ ಹೊರಡಲಿದ್ದು, ಬೆಂಗಳೂರಿನಿಂದ ಕಲಬುರಗಿಗೆ ಹೊರಡುವ ರೈಲು ರಾತ್ರಿ 9.44ಕ್ಕೆ ಯಾದಗಿರಿ ತಲುಪಲಿದೆ.
  • ಈ ರೈಲು ಸಂಪೂರ್ಣ ಹವಾನಿಯಂತ್ರಿತ ರೈಲಾಗಿದ್ದು ಎ.ಸಿ. ಚೇರ್‌ ಕಾರ್‌ ಮತ್ತು ಎಕ್ಸಿಕ್ಯೂಟಿವ್‌ ದರ್ಜೆಯ ಪ್ರಯಾಣವನ್ನು ಹೊಂದಿದೆ.