ಮೈಸೂರು: ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಡಾ.ಪಿ.ಪುಟ್ಟಸ್ವಾಮಿ ಅವರಿಗೆ ಮೈಸೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ನಾಲ್ಕು ವರ್ಷ ಶಿಕ್ಷೆಯೊಂದಿಗೆ 50 ಸಾವಿರ ರೂ. ದಂಡ ವಿಧಿಸಿದೆ.
ಏನಿದು ಪ್ರಕರಣ: 2017 ರಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಶಿವಕುಮಾರ್ ಅವರ ಶಸ್ತ್ರ ಚಿಕಿತ್ಸೆಗೆ ಕೆ.ಆರ್. ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಪುಟ್ಟಸ್ವಾಮಿ ಅವರು 40 ಸಾವಿರ ರೂ. ಗೆ ಲಂಚಕ್ಕೆ ಬೇಡಿಕೆಯನ್ನು ಶಿವಕುಮಾರ್ ಅವರ ಸೋದರ ದೇವರಾಜು ಬಳಿ ಇಟ್ಟಿದ್ದರು.
ಹಣ ನೀಡುವ ವಿಚಾರದಲ್ಲಿ ವೈದ್ಯರ ಬಳಿ ಮಾತನಾಡಿರುವುದನ್ನು ಮೊಬೈಲ್ ನಲ್ಲಿ ಚಿತ್ರಿಕರಿಸಿಕೊಂಡಿದ್ದ ದೇವರಾಜು ಅವರು, 2 ಸಾವಿರ ರೂ. ಲಂಚ ನೀಡಿದ್ದರು. ಬಾಕಿ ಹಣವನ್ನು ನೀಡುವ ಮುನ್ನ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಉಳಿದ 26 ಸಾವಿರ ರೂ.ಗಳನ್ನು ಡಾ. ಪುಟ್ಟಸ್ವಾಮಿ ಅವರಿಗೆ ನೀಡುವಾಗ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಶೇಖರ್ ಅವರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನಲೆಯಲ್ಲಿ ನ್ಯಾಯಾಧೀಶರಾದ ಭಾಗ್ಯ ಅವರು ಈ ಶಿಕ್ಷೆ ವಿಧಿಸಿದ್ದಾರೆ. ಲೋಕಾಯುಕ್ತ ಪರವಾಗಿ ಮುತ್ತಮ್ಮ ಪೂಣಚ್ಛ ವಾದ ಮಂಡಿಸಿದ್ದರು.