ಪಟ್ಟಣದ ಹೊರವಲಯದ ರೇಷ್ಮೆ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಚ್.ಟಿ.ಮಂಜು ಮಾತನಾಡಿದರು. ಶ್ರೀನಿವಾಸ್, ರಾಜಮೂರ್ತಿ, ಡಾ.ಎಸ್.ಯು.ಅಶೋಕ್, ಕೆ.ಸುಷ್ಮಾ ಇತರರು ಇದ್ದರು. 
ಜಿಲ್ಲೆ

ನದಿ, ಕೆರೆ-ಕಟ್ಟೆಗಳಿಗೆ ತ್ಯಾಜ್ಯ ನೀರು ಸೇರ್ಪಡೆ

ಲೋಕೇಶ್ ಮನು. ಡಿ

ಕೆ.ಆರ್.ಪೇಟೆ: ಪುರಸಭೆಯ ಒಳಚರಂಡಿ ನೀರು ಸೇರಿದಂತೆ ತಾಲೂಕಿನ ವಿವಿಧೆೆಡೆಯ ಕೈಗಾರಿಕೆಗಳ ತ್ಯಾಜ್ಯ ನೀರು ಹೇಮಾವತಿ ನದಿ ಹಾಗೂ ಕೆರೆ-ಕಟ್ಟೆಗಳನ್ನು ಸೇರಿ ಪರಿಸರ ಮಾಲಿನ್ಯವಾಗುತ್ತಿದ್ದರೂ ಯಾವುದೇ ಕ್ರಮ ವಹಿಸದ ಪರಿಸರ ಇಲಾಖೆ, ಪುರಸಭೆ, ಕೃಷಿ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಶಾಸಕ ಎಚ್.ಟಿ.ಮಂಜು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಹೊರವಲಯದ ರೇಷ್ಮೆ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುರಸಭೆಯ ಒಳಚರಂಡಿ ಯೋಜನೆ ಪೂರ್ಣಗೊಳ್ಳದಿದ್ದರೂ ಕೊಳಚೆ ನಿರ್ಮೂಲನಾ ಮಂಡಲಿಯಿಂದ ಅದನ್ನು ಪುರಸಭೆ ಹಸ್ತಾಂತರ ಮಾಡಿಕೊಂಡಿದೆ. ಪಟ್ಟಣದ ಕಾಗುಂಡಿ ಹಳ್ಳದ ಬಳಿ ಇರುವ ವೆಟ್‌ವೆಲ್ ಕಾರ್ಯನಿರ್ವಹಿಸುತ್ತಿಲ್ಲ. ಪಟ್ಟಣದ ಮಲಯುಕ್ತ ಕಲುಷಿತ ನೀರು ಕಾಗುಂಡಿ ಹಳ್ಳದ ಮೂಲಕ ಹೊಸಹೊಳಲು ಕರೆ ಸೇರಿ ಕೆರೆ ಕಲುಷಿತಗೊಳ್ಳುತ್ತಿದೆ. ಇದೇ ತಾಲೂಕಿನ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಹಾರು ಬೂದಿ ಸಮಸ್ಯೆಯಿಂದ ಕಾರ್ಖಾನೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನ ನರಕ ಯಾತನೆ ಅನುಭವಿಸುತ್ತಿದ್ದಾರೆ. ಹಾರುಬೂದಿಯಿಂದ ರೈತರ ಹೊಲಗದ್ದೆಗಳು ಹಾಳಾಗುತ್ತಿವೆ. ರೈತರು ಬೆಳೆಯುವ ಭತ್ತ, ಕಬ್ಬು, ತೆಂಗು, ಅಡಕೆ ಮುಂತಾದ ಬೆಳೆಗಳಲ್ಲಿ ಇಳುವರಿ ಕುಸಿತವಾಗಿದೆ. ಈ ಬಗ್ಗೆ ವ್ಯಾಪಕ ದೂರುಗಳಿದ್ದರೂ ಪರಿಸರ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ತಾಲೂಕಿನ ತೆಂಡೇಕೆರೆ ಬಳಿ ಇರುವ ಫುಡ್ ಪಾರ್ಕ್ ಘಟಕಗಳ ತ್ಯಾಜ್ಯ ನೀರು ಕೆಳಭಾಗದ ಕೆರೆ-ಕಟ್ಟೆಗಳಿಗೆ ಸೇರುತ್ತುದೆ. ಈ ಬಗ್ಗೆ ಪರಿಸರ ಇಲಾಖೆ ಕೇವಲ ಕಾಟಾಚಾರದ ನೋಟಿಸ್ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಹೇಮಾವತಿ ನದಿ ಹಾಗೂ ಕೆರೆ-ಕಟ್ಟೆಗಳು ನೀರಾವರಿ ಇಲಾಖೆಯ ವ್ಯಾಪ್ತಿಗೆ ಸೇರಿದ್ದರೂ ನೀರಾವರಿ ಇಲಾಖೆ ಕೂಡ ಮೌನವಾಗಿದೆ ಎಂದು ಕಿಡಿಕಾರಿದ ಶಾಸಕರು, ಪರಿಸರ ಸಂರಕ್ಷಣೆ ಬಗ್ಗೆ ತಕ್ಷಣ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹೂಳೆತ್ತದ ನೀರಾವರಿ ಇಲಾಖೆ: ತಾಲೂಕಿನ ಹೇಮಗಿರಿ, ಮಂದಗೆರೆ ನಾಲೆಗಳಲ್ಲಿ ಹೂಳೆತ್ತದಿದ್ದರೂ ಹೂಳು ತೆಗೆದಂತೆ ಮಾಡಿ ಸರ್ಕಾರಿ ಹಣ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ನೀರಾವರಿ ಇಲಾಖೆಯ ಇಇ ಆನಂದ್ ಅವರನ್ನು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡ ಶಾಸಕ ಎಚ್.ಟಿ.ಮಂಜು, ನಿಮ್ಮ ಕಾರ್ಯವೈಕರಿಯ ಬಗ್ಗೆ ನಿಮಗೇ ಅಸಹ್ಯವಾಗುತ್ತಿಲ್ಲವೆ? ಜಲಾಶಯದಲ್ಲಿ ಸಾಕಷ್ಟು ನೀರಿದ್ದರೂ ನಾಲೆಯ ಕೊನೆಯ ಭಾಗದ ರೈತರಿಗೆ ನಿಮ್ಮಿಂದ ನೀರು ಕೊಡಲಾಗಲಿಲ್ಲ. ತಕ್ಷಣವೇ ನಾಲೆಗಳಲ್ಲಿ ಹೂಳೆತ್ತಿಸಿ ನಾಲೆಗಳ ಕೊನೆಯ ಭಾಗದ ಅಚ್ಚುಕಟ್ಟು ರೈತರಿಗೆ ನೀರು ಚಕೊಡಿ ಎಂದು ತಾಕೀತು ಮಾಡಿದರು. ಅಲ್ಲದೆ ಹೂಳು ತೆಗೆಯದ ನಾಲೆಗಳ ಫೋಟೋಗಳನ್ನು ಪ್ರದರ್ಶಿಸಿದರು.

ಅಬಕಾರಿ ನಿಯಮಗಳಿಗೆ ವಿರುದ್ಧ್ದವಾಗಿ ತಾಲೂಕಿನಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಅಕ್ಕಿಹೆಬ್ಬಾಳು ಹೋಬಳಿಯ ಸೋಮನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಶಾಲೆ ಮತ್ತು ದೇವಾಲಯದ ಸಮೀಪದಲ್ಲಿಯೇ ಮದ್ಯದಂಗಡಿ ನಡೆಸಲಾಗುತ್ತಿದೆ. ಈ ಅಂಗಡಿಯನ್ನು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಸಾಕಷ್ಟು ಸಲ ದೂರು ನೀಡಿದ್ದರೂ ಅಬಕಾರಿ ಇಲಾಖೆ ಕ್ರಮ ವಹಿಸುತ್ತಿಲ್ಲ. ಮದ್ಯದಂಗಡಿಯವ ಪರವಾಗಿ ವರದಿ ನೀಡದೆ ನೈಜ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿ ಗ್ರಾಮದೊಳಗಿನ ಮದ್ಯದಂಗಡಿ ತೆರವುಗೊಳಿಸುವಂತೆ ಅಬಕಾರಿ ಅಧಿಕಾರಿ ದೀಪಕ್ ಅವರಿಗೆ ಶಾಸಕರು ಸೂಚಿಸಿದರು.

ಪೊಲೀಸರ ವಿರುದ್ಧ ಆಕ್ರೋಶ: ಇಂದಿನ ಕೆಡಿಪಿ ಸಭೆಗೆ ತಾಲೂಕಿನ ಪಟ್ಟಣ, ಗ್ರಾಮಾಂತರ ಮತ್ತು ಕಿಕ್ಕೇರಿ ಪೊಲೀಸ್ ಠಾಣೆಯ ಯಾವುದೇ ಇನ್‌ಸ್ಪೆಕ್ಟರ್‌ಗಳಾಗಲಿ ಅಥವಾ ಪಿಎಸ್‌ಐ ಗಳಾಗಲೀ ಹಾಜರಾಗದೆ ತಮ್ಮ ಅಧೀನ ಸಿಬ್ಬಂದಿಯನ್ನು ಕಳುಹಿಸಿದ್ದರು. ಇದರಿಂದ ಕೆರಳಿದ ಶಾಸಕರು, ಕೆಡಿಪಿ ಸೇರಿದಂತೆ ಯಾವುದೇ ಸರ್ಕಾರಿ ಸಭೆಗಳಿಗೂ ಪೊಲೀಸ್ ಅಧಿಕಾರಿಗಳು ಬರುತ್ತಿಲ್ಲ. ಪೊಲೀಸ್ ಇಲಾಖೆ ಸರ್ಕಾರಿ ನಿಯಮ ಪಾಲಿಸದೆ ಅಸಹಕಾರ ಧೋರಣೆ ಅನುಸರಿಸುತ್ತಿದೆ. ಸಾರ್ವಜನಿಕ ಸಮಸ್ಯೆಗಳನ್ನು ಸಭೆಯಲ್ಲಿ ನಾನು ಯಾರೊಂದಿಗೆ ಚರ್ಚಿಸಬೇಕು. ಶಾಸಕನಾದ ನಾನೇ ಪೊಲೀಸ್ ಠಾಣೆಗೆ ಬಂದು ಸಮಸ್ಯೆಗಳನ್ನು ಹೇಳಿಕೊಳ್ಳಬೇಕಾ? ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ,

ಮನೆ ನಿರ್ಮಿಸದ ಸ್ಲಂಬೋರ್ಡ್: ಪಟ್ಟಣದಲ್ಲಿ ಸ್ಲಂ ಬೋರ್ಡ್ 500 ಮನೆಗಳ ನಿಮಾಣಕ್ಕೆ ಮಂಜೂರಾತಿ ದೊರಕಿದೆ. ಆದರೆ ಸ್ಲಂ ಬೋರ್ಡ್ ಇದೂವರೆಗೆ ಕೇವಲ 15 ಮನೆಗಳನ್ನು ಮಾತ್ರ ನಿರ್ಮಿಸಿದೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕರ ಪ್ರಶ್ನೆಗೆ ಉತ್ತರಿಸಿದ ಸ್ಲಂ ಬೋರ್ಡ್ ಇಂಜಿನಿಯರ್ ಕುಮಾರೇಶ್ವರ ಅವರು ಪಟ್ಟಣ ವ್ಯಾಪ್ತಿಯಲ್ಲಿ 15 ಮನೆ ನಿರ್ಮಿಸಿದ್ದು, 65 ಮನೆಗಳ ನಿರ್ಮಾಣ ಕಾಮಗಾರಿ ಅರೆಬರೆಯಾಗಿದೆ. ನಿಯಮಾನುಸಾರ ಫಲಾನುಭವಿಗಳು ಒಂದು ಲಕ್ಷ ರೂ. ಹಣವನ್ನು ಸ್ಲಂ ಬೋರ್ಡಿಗೆ ಪಾವತಿಸಬೇಕು. ಫಲಾನುಭವಿಗಳು ಹಣ ಸಂದಾಯ ಮಾಡದ ಕಾರಣ 65 ಮನೆಗಳ ಕಾಮಗಾರಿ ಅರ್ಧಕ್ಕೆ ನಿಂತಿದೆ. ಪುರಸಭಾ ವ್ಯಾಪ್ತಿಯ ಹೊಸಹೊಳಲಿನಲ್ಲಿ 6.30 ಎಕರೆ ಜಾಗವನ್ನು ಪುರಸಭೆ ನೀಡಬೇಕಾಗಿದೆ. ನಿವೇಶನ ಸಮಸ್ಯೆ ಬಗೆಹರಿದ ಕೂಡಲೇ ಸ್ಲಂ ಬೋರ್ಡ್ ವತಿಯಿಂದ 500 ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಸ್ಪಷ್ಟನೆ ನೀಡಿದರು.

ನಿರ್ಮಿತಿ ಕೇಂದ್ರ ಅಧಿಕಾರಿಗಳ ತರಾಟೆ: ನಿರ್ಮಿತಿ ಕೇಂದ್ರದ ಮೂಲಕ ತಾಲೂಕಿನ ವಿವಿಧೆೆಡೆ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದ ಶಾಸಕರು, ಹಣವಿದ್ದರೂ ಕಾಮಗಾರಿ ಪೂರ್ಣಗೊಳಿಸದ ನಿರ್ಮಿತಿ ಕೆಂದ್ರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಜಯನಗರ ಬಡಾವಣೆಯಲ್ಲಿ ನಿರ್ಮಿತಿ ಕೇಂದ್ರ 14 ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಿದೆ. ಮಾರುಕಟ್ಟೆ ದರಕ್ಕಿಂತ ಮೂರುಪಟ್ಟು ಅಧಿಕ ಬೆಲೆಗೆ ಸಾಮಗ್ರಿ ಖರೀದಿ ಮಾಡಿರುವ ಕಾರಣ ಒಳಾಂಗಣ ಕ್ರೀಡಾಂಗಣಕ್ಕೆ ತಾಂತ್ರಿಕ ಸಮಿತಿಯ ಒಪ್ಪಿಗೆ ಇದೂವರೆಗೂ ದೊರಕಿಲ್ಲ. ಆದರೂ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಗುತ್ತಿಗೆದಾರನಿಗೆ ಬಿಲ್ ಪಾವತಿಸಿರುವ ಬಗ್ಗೆ ಶಾಸಕರು ತನಿಖೆಗೆ ಸೂಚಿಸಿದರು.

ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಾಲೂಕು ಪಂಚಾಯತಿ ಆಡಳಿತಾಧಿಕಾರಿ ರಾಜಮೂರ್ತಿ, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾ.ಪಂ ಇಒ ಕೆ.ಸುಸ್ಮಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.