ಮಂಡ್ಯ: ಪ್ರಸ್ತುತ ದಿನಗಳಲ್ಲಿ ಶೇ.40 ರಿಂದ 50ರಷ್ಟು ಹದಿಹರೆಯದ ಯುವಕರೇ ಮಾದಕ ವಸ್ತುಗಳಿಗೆ ದಾಸರಾಗಿ ಬಲಿಯಾಗುತ್ತಿದ್ದಾರೆ. ಪರಿಣಾಮ ಅವರ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿವೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಆತಂಕ ವ್ಯಕ್ತಪಡಿಸಿದರು.
ನಗರದ ಎಸ್.ಬಿ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಿಮ್ಸ್, ಆಯುಷ್ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಅನನ್ಯ ಹಾರ್ಟ್ ಸಂಸ್ಥೆ ಸಹಯೋಗದಲ್ಲಿ ಡಾ.ಮಹಾಂತ ಶಿವಯೋಗಿ ಸ್ವಾಮೀಜಿ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ದುಶ್ಚಟದಿಂದ ದೂರ ಉಳಿದು ತಮ್ಮ ಜೀವನ ಗುರಿ ತಲುಪುವ ಕಡೆ ಶ್ರಮಿಸಬೇಕು. ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದರೆ ಆರೋಗ್ಯಕರ ಹಾಗೂ ಸ್ವಾಸ್ಥೃ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಯುವಕರು ಮಾದಕ ವ್ಯಸನಿಗಳಾದರೆ ಇಡೀ ಕುಟುಂಬ ಹಾಗೂ ಸಮಾಜಕ್ಕೆ ಅವಮಾನ. ತಂದೆ, ತಾಯಿಗೆ ಅವಮಾನ. ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಆದ್ದರಿಂದ ಯುವ ಸಮುದಾಯ ವ್ಯಸನಮುಕ್ತರಾಗಬೇಕು. ಉತ್ತಮ ಸಮಾಜ, ದೇಶ ಕಟ್ಟುವ ಸತ್ಪ್ರಜೆಗಳಾಗಬೇಕು. ಮಾದಕ ವ್ಯಸನಿಗಳ ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ. ಹೆಂಡತಿ ಮೇಲೆ ಹಲ್ಲೆ ಮಾಡುವುದು, ಕಳ್ಳತನ, ಮೋಸ ಮುಂತಾದ ತಪ್ಪು ದಾರಿಗಳನ್ನು ಆಯ್ಕೆ ಮಾಡಿಕೊಂಡು ಕುಟುಂಬದಲ್ಲಿ ಅಶಾಂತಿಗೆ ನೆಲೆ ಮಾಡಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ ಎಂದರು.
ಭಾರತದಲ್ಲಿ ದಿನೇ ದಿನೇ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಇದರಿಂದ ವ್ಯಕ್ತಿಗತವಾಗಿ ಹಾಗೂ ಸಮಾಜದ ಮೇಲೆ ಸಾಕಷ್ಟು ದುಷ್ಪಾರಿಣಾಮಗಳಾಗುತ್ತಿವೆ. ಮಾದಕ ವಸ್ತುಗಳನ್ನು ನಾವು ಉಪಯೋಗಿಸಿದರೆ ತಾನೆ ಮಾದಕ ವಸ್ತುಗಳ ಉತ್ಪಾದನೆಯಾಗಿ ಮಾರಾಟವಾಗುತ್ತದೆ. ಮಾದಕ ವಸ್ತುಗಳ ಬಳಕೆಯನ್ನು ನಿಷೇಧಿಸುವುದಾಗಿ ಪ್ರತಿಯೊಬ್ಬರು ಪಣ ತೊಡಬೇಕು. ಮಂಡ್ಯದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿ ಕ್ಯಾನ್ಸರ್ ಆಸ್ಪತ್ರೆ ಇಲ್ಲದ ಕಾರಣ ಅದು ಗೊತ್ತಾಗುತ್ತಿಲ್ಲ. ಮಂಡ್ಯದಲ್ಲಿ ಕಿದ್ವಾಯಿ ಆಸ್ಪತ್ರೆ ಮಾಡಿದರೆ ಕ್ಯಾನ್ಸರ್ ರೋಗಿಗಳೇ ತುಂಬುತ್ತಾರೆ. ಹೆಣ್ಣು ಮಕ್ಕಳನ್ನು ಕೀಳಾಗಿ ನೋಡುವ ಸಂಸ್ಕೃತಿ ಬದಲಾಗಬೇಕು. ಹೆಣ್ಣು ಮಕ್ಕಳನ್ನು ಭ್ರೂಣಹತ್ಯೆ ಮಾಡುತ್ತಾರೆ ಎಂಬ ಕಳಂಕ ಮಂಡ್ಯಕ್ಕೆ ಅಂಟಿದೆ. ಇದನ್ನು ಮುಂದಿನ ದಿನಗಳಲ್ಲಿ ಹೋಗಲಾಡಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರದ ಮನೋವೈದ್ಯ ಡಾ.ಶಶಾಂಕ್ ಮಾತನಾಡಿ, ಜೀವನದಲ್ಲಿ ಪುಸ್ತಕ ಓದುವುದು, ಚಿತ್ರಕಲೆ, ಹಾಡುಗಾರಿಕೆ, ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವುದು, ಯಾವುದಾದರೂ ಆಟ, ವ್ಯಾಯಮ ಮುಂತಾದ ಒಳ್ಳೆ ಹವ್ಯಾಸಗಳನ್ನು ಬೆಳೆಸಿಕೊಂಡಾಗ ಮನಸ್ಸಿಗೆ ಸಂತೋಷ ಸಿಗುತ್ತದೆ. ಮಾದಕ ವಸ್ತುಗಳ ಸೇವನೆಯಂತಹ ದುಶ್ಚಟಗಳಿಂದ ದೂರವಿರಬಹುದು. ಪ್ರತಿಯೊಬ್ಬರು ಒಳ್ಳೆಯ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವ್ಯಸನ ಎನ್ನುವುದು ಚಟವಾಗಿ ಮುಂದೆ ಅದು ಒಂದು ಕಾಯಿಲೆಯಾಗಿ ಪರಿವರ್ತನೆಯಾಗುತ್ತದೆ. ಇದರಿಂದ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ದುಷ್ಪಾರಿಣಾಮಗಳು ಬೀರುತ್ತವೆ. 10 ಜನ ಮಾದಕ ವ್ಯಸನಿಗಳು ಮಾದಕ ವಸ್ತುಗಳನ್ನು ತ್ಯಜಿಸಲು ಚಿಕಿತ್ಸೆ ಪಡೆದರೆ ಒಂದಿಬ್ಬರು ಮಾತ್ರ ಗುಣಮುಖರಾಗಿ ವ್ಯಸನಮುಕ್ತರಾಗುತ್ತಾರೆ. 18 ರಿಂದ 25 ವಯೋಮಾನದವರೇ ಮಾದಕ ವಸ್ತುಗಳ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಹದಿಯರೆಯದ ವಯಸ್ಸಿನಲ್ಲಿ ಕ್ಷಣಿಕ ಸುಖಕ್ಕಾಗಿ ಬಲಿಯಾಗುತ್ತಿದ್ದಾರೆ. ಮಾದಕ ವ್ಯಸನದಿಂದ ಮುಕ್ತರಾಗಬೇಕು ಎಂದು ಕಿವಿಮಾತು ಹೇಳಿದರು.
ಮಿಮ್ಸ್‌ನ ಸಮುದಾಯ ಆರೋಗ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಿದ್ದಲಿಂಗಪ್ಪ ಎಸ್.ಹೂಗಾರ್ ಮಾತನಾಡಿ, ವ್ಯಕ್ತಿಗಳು ಮಾದಕ ವಸ್ತುಗಳಿಗೆ ಬಲಿಯಾಗುವುದರಿಂದ ವೈಯಕ್ತಿಕ ಹಾಗೂ ಸಮಾಜದ ಮೇಲೆ ತಕ್ಷಣ ಹಾಗೂ ದೀರ್ಘಕಾಲಿಕ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳನ್ನು ಸೇವಿಸಿದಾಗ ಕ್ಷಣಿಕ ಸುಖ ಸಿಗುತ್ತದೆ. ಆದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೆಚ್ಚು ಡೋಸ್ ಮಾದಕ ವಸ್ತು ಸೇವನೆ ಮಾಡಿದಾಗ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇಂತಹ ಚಟಕ್ಕೆ ಬಲಿಯಾಗಬೇಡಿ. ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳದೆ ಒಳ್ಳೆಯ ಜೀವನ ರೂಪಿಸಿಕೊಳ್ಳಿ ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಮನಸ್ಸಿಗೆ ಒಳ್ಳೆಯ ಹವ್ಯಾಸಗಳನ್ನು ನೀಡಿದರೆ ಬೇಡದೆ ಇರುವುದರ ಕಡೆ ಗಮನ ಇರಲ್ಲ. ಒಳ್ಳೆಯ ಹವ್ಯಾಸಗಳನ್ನು ಅಳವಡಿಸಿಕೊಂಡಾಗ ಕೆಟ್ಟದ್ದಕ್ಕೆ ಜಾಗ ಇರುವುದಿಲ್ಲ. ಆದ್ದರಿಂದ ಇಂದು ಕಾರ್ಯಕ್ರಮದಲ್ಲಿ ಕೇಳಿದ ಒಳ್ಳೆಯ ವಿಚಾರಗಳನ್ನು ಮನಸ್ಸಿನಲ್ಲಿರಿಸಿಕೊಳ್ಳಿ. ಪ್ರತಿಯೊಬ್ಬರೂ ಕೆಟ್ಟ ಹವ್ಯಾಸಗಳ ಬದಲಿಗೆ ಒಳ್ಳೆಯ ಹವ್ಯಾಸಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ತಂಬಾಕು ನಿಯಂತ್ರಣ ಕೋಶಾಧಿಕಾರಿ ತಿಮ್ಮರಾಜು ಪ್ತಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಬೆಟ್ಟಸ್ವಾಮಿ, ಡಿಡಿಪಿಯು ಸಿ.ಚೆಲುವಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸೀತಾಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ರಾಜಮೂರ್ತಿ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ ಹಾಜರಿದ್ದರು.
ಜಿಲ್ಲಾ ಆಯುಷ್ ಇಲಾಖೆಯಿಂದ ಆರೋಗ್ಯ ವೃದ್ಧಿಸುವ ಕಷಾಯವನ್ನು ಮಕ್ಕಳಿಗೆ ವಿತರಿಸಲಾಯಿತು. ವ್ಯಸನ ಮುಕ್ತ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.