ಬಾಗೂರು: ನಾಗರನವಿಲೆ ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
29 ವರ್ಷದ ಬಳಿಕ ಜರುಗಿದ ಅಡ್ಡಪಲ್ಲಕ್ಕಿ ಉತ್ಸವವನ್ನು ಗ್ರಾಮದ ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಸ್ವಾಗತಿಸಿದರು.
ಶನಿವಾರ ರಾತ್ರಿ ಪುರಾಣ ಪ್ರಸಿದ್ಧ ನವಿಲೆ ನಾಗೇಶ್ವರ ಸ್ವಾಮಿ ದೇವಾಲಯದ ಮುಂಭಾಗ ಗ್ರಾಮದ ಮಹಿಳೆಯರು ಪೂರ್ಣ ಕುಂಭ ಸ್ವಾಗತದೊಂದಿಗೆ ರಂಭಾಪುರಿ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು. ನಂತರ ಶ್ರೀ ನಾಗೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿಸಿದ ಬಳಿಕ ಅಡ್ಡಪಲ್ಲಕ್ಕಿ ಉತ್ಸವ ಆರಂಭವಾಯಿತು.
ವೀರಗಾಸೆ, ಡೊಳ್ಳು ಕುಣಿತದೊಂದಿಗೆ ಗ್ರಾಮದ ಬೀದಿಗಳಲ್ಲಿ ಉತ್ಸವ ಸಾಗಿತು. ಶಾಸಕ ಸಿ.ಎನ್. ಬಾಲಕೃಷ್ಣ ಅವರು ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆದರು.
ಉತ್ಸವದಲ್ಲಿ ರಂಭಾಪುರಿ ದೊಡ್ಡಗುಣಿ ಶಾಖಾ ಮಠದ ಶ್ರೀ ರೇವಣ್ಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಯಡಿಯೂರು ಶಾಖಾ ಮಠದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್, ಶಿವಾನುಗ್ರಹ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಿದ್ದೇಶ್ ಶಾಸ್ತ್ರಿ, ನವಿಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಶ್ರೀ ನಾಗೇಶ್ವರ ಸ್ವಾಮಿ ಕಲ್ಯಾಣ ಮಂಟಪ ಅಧ್ಯಕ್ಷ ಎನ್.ಕೆ. ನಾಗಪ್ಪ, ರಥ ನಿರ್ಮಾಣ ಸಮಿತಿ ಅಧ್ಯಕ್ಷ ಸದಾಶಿವಯ್ಯ, ಭಕ್ತರಹಳ್ಳಿ ಪುಟ್ಟರಾಜ್, ನಾಗೇಶ್, ನಾಗರಾಜ್, ಅನಿತಾ, ಸ್ವಾತಿ, ನಾಗವೇಣಿ, ಅಕ್ಕನಹಳ್ಳಿ ಕುಮಾರಸ್ವಾಮಿ ಶಾಸ್ತ್ರಿ, ಶಿವಪ್ರಸಾದ್, ಶಿವಾನುಗ್ರಹ ಸೇವಾ ಪ್ರತಿಷ್ಠಾನ ಸದಸ್ಯರು ಇದ್ದರು.