ಜಿಲ್ಲೆ

ಹಳ್ಳಿಕಾರರ ಪ್ರಗತಿಗಾಗಿ ಪ್ರವರ್ಗ-1 ಕ್ಕೆ ಸೇರಿಸಿ; ರಾಜ್ಯ ಹಳ್ಳಿಕಾರರ ಸಂಘ ಆಗ್ರಹ

ಬೆಂಗಳೂರು: ಜಗತ್ತು ಪ್ರಗತಿಪಥದಲ್ಲಿದ್ದರೂ ಹಳ್ಳಿಕಾರ ಸಮುದಾಯದವರು ಇಂದಿಗೂ ಶಿಕ್ಷಣ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಸಮಾಜದ ಪ್ರಗತಿಗಾಗಿ ಪ್ರವರ್ಗ-1 ಕ್ಕೆ ಸೇರಿಸಬೇಕೆಂದು ರಾಜ್ಯ ಹಳ್ಳಿಕಾರರ ಸಂಘದ ಉಪಾಧ್ಯಕ್ಷ ಕೆ.ಎಂ.ನಾಗರಾಜ್​ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಾಗರಬಾವಿಯಲ್ಲಿ ಭಾನುವಾರ ಆಯೋಜಿಸಿದ್ದ ಬೆಂಗಳೂರು ನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲಾಮಟ್ಟದ ಹಳ್ಳಿಕಾರರ ಜನಾಂಗದ ಸಮಾವೇಶದಲ್ಲಿ ಮಾತನಾಡಿದರು.

ಹಳ್ಳಿಕಾರ ಜನಾಂಗದವರು 330ಕ್ಕೂ ಹೆಚ್ಚು ತಾಲೂಕು ಮತ್ತು ಜಿಲ್ಲಾ ಗಡಿಗಳ ಅರಣ್ಯ ಪ್ರದೇಶದ ಅಂಚಿನಲ್ಲಿ ಪಶುಗಳನ್ನು ಸಾಕುತ್ತಾ ಜೀವನ ಸಾಗಿಸುತ್ತಿದ್ದಾರೆ. ಬಡತನದಿಂದ ಇಂದಿಗೂ ಜೀವನಮಟ್ಟ ಸುಧಾರಿಸಿಲ್ಲ. ಜನಾಂಗಕ್ಕೆ ಸರ್ಕಾರ ಶಿಕ್ಷಣ, ಸಾಮಾಜಿಕ, ಆರ್ಥಿಕವಾಗಿ ಬಲ ತುಂಬಲು ಹಿಂದುಳಿದ ವರ್ಗಕ್ಕೆ ಸೇರಿಸಬೇಕಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಹಿಂದುಳಿದ ವರ್ಗಗಳ ಸಚಿವ ಶಿವರಾಜ್​ ಎಸ್​. ತಂಗಡಗಿ ನೇತೃತ್ವದಲ್ಲಿ ಅ.27 ರಂದು ಬೃಹತ್​ ಜನಾಂಗದ ಸಮಾವೇಶ ಆಯೋಜಿಸಲಾಗುತ್ತಿದೆ.

ಹಳ್ಳಿಕಾರ ತಳಿಯ ಹಸು ಮತ್ತು ಎತ್ತುಗಳ ಸಂರಕ್ಷಣೆಗಾಗಿ ಸರ್ಕಾರ ಪೋತ್ಸಾಹ ನೀಡಬೇಕಿದೆ. ಹಿಂದಿನ ಮೈಸೂರು ರಾಜರು, ಸರ್ಕಾರಗಳು ಹಳ್ಳಿಕಾರ ಪಶುಗಳ ಸಾಕಾಣಿಕೆಗೆ ನೀಡುತ್ತಿದ್ದ ಜಮೀನನ್ನು ಜನಾಂಗಕ್ಕೆ ಮರಳಿ ನೀಡಬೇಕು ಎಂದರು.

ರಾಜ್ಯ ಸಮಿತಿಯ ಪದಾಧಿಕಾರಿಗಳಾದ ನಾರಾಯಣಪ್ಪ, ಟಿ.ಶೀನಿವಾಸ್​, ಎಲ್​.ನಾರಾಯಣ ಮೂರ್ತಿ, ನಾಗರಾಜು, ಎಚ್​.ಎನ್​.ಮಹಾಲಿಂಗಯ್ಯ, ಕೆ.ಸಿ.ಚಿಕ್ಕಣ್ಣಯ್ಯ, ಎಂ.ಮಾರುತಿ, ಎಂ.ಪಿ.ಜಯರಾಮ್​, ಸಿ.ದಾಸೇಗೌಡ, ಭೈರಪ್ಪ ಇತರರಿದ್ದರು.