ಜಿಲ್ಲೆ

"ಪ್ರವರ್ಗ-1'ಕ್ಕೆ ಹಳ್ಳಿಕಾರ ಜಾತಿ ಸೇರಿಸಿ: ಆಯೋಗಕ್ಕೆ ಪತ್ರ ಬರೆದ ರಾಜ್ಯ ಹಳ್ಳಿಕಾರರ ಸಂಘ

ಬೆಂಗಳೂರು: ಹಳ್ಳಿಕಾರ ಸಮದಾಯವನ್ನು ಪ್ರವರ್ಗ "3ಎ'ನಿಂದ "ಪ್ರವರ್ಗ-1' ಸೇರ್ಪಡೆಗೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಕೋರಿ ಕರ್ನಾಟಕ ರಾಜ್ಯ ಹಳ್ಳಿಕಾರರ ಸಂಘ, ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆದಿದೆ.

ಹಿಂದಿನ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್​ ಹೆಗಡೆಗೆ ಸಮುದಾಯದ ಇತಿಹಾಸ, ವಸ್ತುಸ್ಥಿತಿ, ಆಚಾರ-ವಿಚಾರ ಸೇರಿ ಇತ್ಯಾದಿ ಮಾಹಿತಿ ಒಳಗೊಂಡ ದಾಖಲೆಗಳನ್ನು ಸಲ್ಲಿಸಿ "ಪ್ರವರ್ಗ-1'ಕ್ಕೆ ಸೇರಿಸುವಂತೆ ಮನವಿ ಮಾಡಲಾಗಿತ್ತು. 2022ರ ಸೆ.7ರಂದು ಆಯೋಗವು ನಡೆಸಿದ್ದ ಸಮುದಾಯದ ಸಾರ್ವಜನಿಕರ ವಿಚಾರಣೆಯಲ್ಲಿಯೂ ಸಮುದಾಯದ ಇತಿಹಾಸದ ಕುರಿತು ವಿವರ ನೀಡಲಾಗಿತ್ತು. 1941ರ ಜನಗಣತಿಯಲ್ಲಿ ಸರ್ಕಾರದ ಆದೇಶದಂತೆ ಹಳ್ಳಿಕಾರ ಜಾತಿಯನ್ನು ಪ್ರತ್ಯೇಕ ಜಾತಿಯೆಂದು ಪರಿಗಣಿಸಿ ಜನಗಣತಿ ನಡೆಸಿದ್ದರೂ ನಮ್ಮ ಸಮುದಾಯವನ್ನು ಒಕ್ಕಲಿಗ ಸಮುದಾಯದಕ್ಕೆ ಸೇರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜ್​ ಹೇಳಿದರು.

ರಾಜ್ಯದಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಅಂದಾಜು 75 ಸಾವಿರ ಇದೆ. ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಸಮುದಾಯ ಸರ್ಕಾರದ ಸೌಲಭ್ಯಗಳಿಂದಲೂ ವಂಚಿತವಾಗಿದೆ. ತುಮಕೂರು ಸೇರಿ ಹಳೆಯ ಮೈಸೂರು ಭಾಗದಲ್ಲಿ ಹೆಚ್ಚಿನ ಜನರು ವಾಸಿಸುತ್ತಿದ್ದಾರೆ. ಸಮುದಾಯದ ಕುಲಕಸುಬು ಪಶುಸಂಗೋಪನೆಯಾಗಿದೆ. ಸಮುದಾಯದ ಆಚಾರ-ವಿಚಾರ, ಆಚರಣೆಗಳು ಕಾಡುಗೊಲ್ಲ ಮತ್ತು ಕಾಡುಕುರುಬ ಸಮುದಾಯಕ್ಕೆ ಹೋಲಿಕೆಯಾಗುತ್ತದೆ. ಈ ಬಗ್ಗೆ ಸಾಕಷ್ಟು ದಾಖಲೆಗಳಿಂದಲೂ ರುಜುವಾತಾಗಿದೆ. ಹಳ್ಳಿಕಾರ ಜಾತಿಗೆ ಸರಿಸಮಾನದ ಹಲವು ಸಮುದಾಯಗಳು "ಪ್ರವರ್ಗ-1'ರಲ್ಲಿವೆ ಎಂದು ಆಯೋಗ ಅಧ್ಯಕ್ಷ ಮಧುಸೂಧನ್​ ಆರ್​. ನಾಯಕ್​ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

2024ರ ಅ.27ರಂದು ನಡೆದ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್​ ಸೇರಿ ಇತರೆ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಹಾಗಾಗಿ ಈ ಎಲ್ಲ ಅಂಶಗಳು, ದಾಖಲೆಗಳನ್ನು ಪರಿಶೀಲಿಸಿ ಹಿಂದುಳಿದ ಸಮುದಾಯವಾದ "ಹಳ್ಳಿಕಾರ' ಜಾತಿಯನ್ನು ಪ್ರವರ್ಗ-1ಕ್ಕೆ ಸೇರಿಸಲು ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಬೇಕು.

| ಕೆ.ಎಂ.ನಾಗರಾಜ್​, ರಾಜ್ಯ ಹಳ್ಳಿಕಾರರ ಸಂಘದ ಉಪಾಧ್ಯಕ್ಷ.