ಬ್ಯಾಡಗಿ: ತಾಲೂಕಿನ ಮಲೆನಾಡು ಪ್ರದೇಶ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಬೆಳೆಯಲಾಗುತ್ತಿದ್ದು, ಈ ಬೆಳೆಯನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ತಾ.ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ ಆಗ್ರಹಿಸಿದರು.
ಪಟ್ಟಣದ ತಾ.ಪಂ. ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಸಿಕ ಸಭೆಯ ಪ್ರಗತಿ ಪರಿಶೀಲನೆ ವೇಳೆ ಅವರು ಮಾತನಾಡಿದರು.
ತಾಲೂಕಿನ ಚಿಕ್ಕಬಾಸೂರು, ಘಾಳಪೂಜಿ, ಸೂಡಂಬಿ, ಹಿರೇಅಣಜಿ, ಕುಮ್ಮೂರು, ಮುತ್ತೂರು, ಕಾಗಿನೆಲೆ, ಕಲ್ಲೇದೇವರು, ತಡಸ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಶುಂಠಿ ಕೃಷಿಯಲ್ಲಿ ಹೊಲ ಸಮಗೊಳಿಸಲು, ಒಡ್ಡು ಹಾಕಲು, ನಾಟಿ ಮಾಡಲು ಹಾಗೂ ಇತ್ಯಾದಿ ನಿರ್ವಹಣೆಯ ಕೆಲಸಕ್ಕೆ ಕೂಲಿಗಾಗಿ ಹಣ ಹೆಚ್ಚು ವ್ಯಯವಾಗುತ್ತಿದೆ. ರೈತರಿಗೆ ಶುಂಠಿ ವಾಣಿಜ್ಯ ಬೆಳೆಯಾಗಿದೆ. ಕೂಡಲೆ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ತೋಟಗಾರಿಕೆ ಜಿಲ್ಲಾ ನಿರ್ದೇಶಕರು ಶುಂಠಿಯ ಬೆಳೆ ಕಾಮಗಾರಿಯನ್ನು ಎನ್ಆರ್ಇಜಿಗೆ ಸೇರ್ಪಡೆಗೊಳಿಸಬೇಕು. ಈ ಕುರಿತು ಸರ್ಕಾರಕ್ಕೆ ಠರಾವು ಮಾಡಿ ಕಳುಹಿಸುವಂತೆ ಸೂಚಿಸಿದರು.
ತಾಲೂಕಿನ ಆಣೂರು ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ವಿುಸಿದ ಅಂಗನವಾಡಿ ಕಟ್ಟಡ ದೇವಸ್ಥಾನ ಕಮಿಟಿ ಪಾಲಾಗಿದೆ. ಅಧಿಕಾರಿಗಳು ಕಟ್ಟಡ ನಿರ್ವಿುಸುವ ಮುನ್ನ ದಾನಪತ್ರ ಇತ್ಯಾದಿ ದಾಖಲೆ ಕುರಿತು ನಿರ್ಲಕ್ಷಿಸಿದ ಪರಿಣಾಮ ಮಕ್ಕಳು ಬೀದಿಗೆ ಬರುವಂತಾಗಿದೆ. ಕಾಗಿನೆಲೆ ಗ್ರಾಮದ ಕೆರೆಯ ಏರಿಯ ಮೇಲೆ ಅಂಗನವಾಡಿ ಕೇಂದ್ರ ನಿರ್ವಿುಸಲಾಗಿದೆ. ಅಧಿಕಾರಿಗಳೇ ಏನು ಮಾಡುತ್ತಿದ್ದೀರಿ, ಮಕ್ಕಳ ತೊಂದರೆಗೆ ಯಾರು ಹೊಣೆ. ಕೂಡಲೆ ಸಂಬಂಧಿಸಿದ ಗ್ರಾಮಸ್ಥರ ಸಭೆ ನಡೆಸಿ ಸಮಸ್ಯೆ ಬಗೆಹರಿಸಿ ಎಂದು ಇಒ ಎ.ಟಿ. ಜಯಕುಮಾರ ಸೂಚಿಸಿದರು.
ಪ್ರತಿಕ್ರಿಯಿಸಿದ ಸಿಡಿಪಿಒ ರಾಮಲಿಂಗಪ್ಪ ಅರಳಿಗುಪ್ಪಿ, ಗ್ರಾಮಸ್ಥರೊಂದಿಗೆ ಮನವೊಲಿಸುವ ಯತ್ನ ನಡೆಸಿದರೂ, ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ, ಈ ಕುರಿತು ಸ್ಥಳೀಯರ ಸಹಕಾರ ಪಡೆಯಲಾಗುವುದು ಎಂದರು.
ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ಮಾತನಾಡಿ, ಅತಿವೃಷ್ಟಿಗೆ ಮನೆಗಳು ನೆಲಕ್ಕುರುಳಿದ್ದು, ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲು ಇ-ಉತಾರ ಲಭ್ಯವಾಗುತ್ತಿಲ್ಲ. ಇದರಿಂದ ಬಡವರ ಗೋಳಾಟ ತಪ್ಪುತ್ತಿಲ್ಲ, ಗ್ರಾಮ ಪಂಚಾಯಿತಿ ಮಟ್ಟದಲ್ಲೆ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕೆ. ರುದ್ರಮನಿ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸುರೇಂದ್ರ ದೊಡ್ಡಮನಿ, ಪ್ರಕಾಶ ಹಿರೇಮಠ ಇತರರಿದ್ದರು.
ಯಲ್ಲನಗೌಡ್ರ ಕರೇಗೌಡ್ರ ಮಾತನಾಡಿ, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ದಂಧೆ ನಡೆದಿದೆ. ಅಬಕಾರಿ ನಿರೀಕ್ಷಕರು ಕಂಡೂ ಕಾಣದಂತೆ ವರ್ತಿಸುತ್ತಿರುವುದು ಸಂಶಯಕ್ಕೆ ಎಡೆ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಕುಡುಕರ ಸಂಖ್ಯೆ ವಿಪರೀತವಾಗಿದ್ದು, ಬಡಕೂಲಿ ಕಾರ್ವಿುಕರು ಚಟಕ್ಕೆ ದಾಸರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಬಕಾರಿ ಇನ್ಸೆಕ್ಟರ್ ಪ್ರಕಾಶ ಹಳಕಟ್ಟೆ ಮಾತನಾಡಿ, ಚುನಾವಣೆ ವೇಳೆ ಸಾಕಷ್ಟು ಗ್ರಾಮಗಳಲ್ಲಿ ಅಕ್ರಮ ಮಾರಾಟಗಾರರನ್ನು ಪತ್ತೆ ಹಚ್ಚಿ ಕೆಲವರ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ದಂಧೆಯಲ್ಲಿ ತೊಡಗಿದವರ ಕುರಿತು ಮಾಹಿತಿ ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.