ಮಂಡ್ಯ: ಜಿಲ್ಲೆಯಲ್ಲಿ ವಿಶ್ವಕರ್ಮ ಹಾಗೂ ವಿಶ್ವಮಾನವ ಜಯಂತಿಯನ್ನು ಯಶಸ್ವಿಯಾಗಿ ಆಚರಿಸಲು ಜಿಲ್ಲಾಡಳಿತ ತೀರ್ಮಾನಿಸಿದ್ದು, 2 ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಿ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವಕರ್ಮ ಜಯಂತಿಯನ್ನು ಜ.18 ರಂದು ಬೆಳಗ್ಗೆ 11ಗಂಟೆಗೆ ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 400ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದು, ವಿಶೇಷ ಉಪನ್ಯಾಸ ಕಾರ್ಯಕ್ರಮ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಕಲ್ಪಿಸಲಾಗುವುದು ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಶ್ವಕರ್ಮ ಸಮುದಾಯದ ಒಟ್ಟು 40 ಜನರನ್ನು ಸನ್ಮಾನಿಸಿ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಗುವುದು ಎಂದರು.
ವಿಶ್ವಮಾನವ ಜಯಂತಿಯನ್ನು ಆಚರಿಸುವ ಸಂಬಂಧ ಸಂಸ್ಥೆಯ ಮುಖಂಡರು ಹಾಗೂ ಸದಸ್ಯರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಸೂಕ್ತ ದಿನಾಂಕವನ್ನು ನಿಗದಿ ಮಾಡಲಾಗುವುದು. ವಿಶ್ವ ಮಾನವ ಜಯಂತಿ ಅಂಗವಾಗಿ ನಗರದ ರೈತ ಸಭಾಂಗಣದ ಮುಂದೆ ಇರುವ ಕುವೆಂಪು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಜಾಥಾ ಮೂಲಕ ಕಲಾ ಮಂದಿರಕ್ಕೆ ತಲುಪುವುದಾಗಿ ತಿಳಿಸಿದ ಎಡಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಜನ ಸಾಧಕರಿಗೆ ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಹೆಚ್ಚು ವಿದ್ಯಾರ್ಥಿಗಳ ಭಾಗವಹಿಸುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಸಭೆಯಲ್ಲಿ ಸಮುದಾಯದ ಮುಖಂಡರಾದ ಧರಣೇಂದ್ರಯ್ಯ, ಎಲ್.ಆನಂದ್, ತಿರುಮಲಾಚಾರ್, ಸಂದೇಶ್, ನಾಗರಾಜಾಚಾರ್, ಎಂ.ಬಿ.ರಮೇಶ್, ಸಿ.ಎಸ್.ಅನುಪಮಾ, ಶಿವಬಸವಾಚಾರಿ, ವೈ.ಡಿ ಶ್ರೀನಿವಾಸಮೂರ್ತಿ, ಕೆ.ಎಚ್.ಗೋವಿಂದಾಚಾರ್ ಇತರರಿದ್ದರು.