ಜಿಲ್ಲೆ

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಎಡಿಸಿ ಮನವಿ

ಮಡಿಕೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯ ಭಾಗವಾಗಿರುವ ಯುವ ಸಮೂಹವು ಮತದಾರರ ಪಟ್ಟಿಗೆ ಕಡ್ಡಾಯವಾಗಿ ಹೆಸರು ನೋಂದಾಯಿಸಿಕೊಂಡು ೨೦೨೩ರ ಸಾಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ತಿಳಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಗೆ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಳ್ಳುವ ಸಂಬಂಧ ಜಿಲ್ಲೆಯ ಎಲ್ಲಾ ಕಾಲೇಜು ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಯುವ ಸಮೂಹ ಸೇರ್ಪಡೆಗಾಗಿ ಜಿಲ್ಲೆಯಾದ್ಯಂತ ಈಗಾಗಲೇ ಅಭಿಯಾನ ಆರಂಭಿಸಲಾಗಿದೆ. ಜಿಲ್ಲೆಯ ಅರ್ಹ ಪ್ರತಿಯೊಬ್ಬ ಯುವ ಸಮೂಹವು ಮತದಾರರ ಪಟ್ಟಿಗೆ ಸೇರ್ಪಡೆಯಾಗುವಂತೆ ಮತ್ತು ಚುನಾವಣಾ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವಂತೆ ಸರಿಯಾದ ಮಾಹಿತಿ ಮತ್ತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.


ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ೦೧-೦೧-೨೦೨೩ಕ್ಕೆ ಅರ್ಹತಾ ದಿನಾಂಕವಾಗಿ ೧೮ ವರ್ಷ ಪೂರ್ಣಗೊಂಡವರು ಮತದಾರರ ಸಹಾಯವಾಣಿ ಆಪ್ ಮೂಲಕ ಮಾಹಿತಿ ಭರ್ತಿ ಮಾಡಿ ನೋಂದಾವಣೆ ಮಾಡಲು ಕ್ರಮವಹಿಸುವಂತೆ ಕಾಲೇಜು ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದರು.


ಮತದಾರರ ಪಟ್ಟಿ ಮತ್ತು ಚುನಾವಣೆಯ ಕುರಿತು ಮತದಾರರಿಗೆ ಮಾಹಿತಿ ನೀಡುವ ಸಲುವಾಗಿ ಭಾರತ ಚುನಾವಣಾ ಆಯೋಗ ಮತದಾರರ ಸಹಾಯವಾಣಿ ಆಪ್ ಅನ್ನು ಬಿಡುಗಡೆ ಮಾಡಿದೆ. ಎಲ್ಲಾ ಮತದಾರರು/ ನಾಗರಿಕರು ತಮ್ಮ ಮೊಬೈಲ್‌ನಲ್ಲಿ ಮತದಾರರ ಸಹಾಯವಾಣಿ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು. ಮತ್ತು ಮತದಾರರ ಸಹಾಯವಾಣಿ ಆಪ್ ಮೂಲಕ ನೋಂದಾಯಿಸಿಕೊಂಡ ವಿದ್ಯಾರ್ಥಿಗಳನ್ನು ಹೊರತುಪಡಿಸಿ ೧೮ ವರ್ಷ ತುಂಬಿದ ಬಾಕಿ ಉಳಿದ ವಿದ್ಯಾರ್ಥಿಗಳನ್ನು ಶೀಘ್ರವೇ ನೋಂದಾಯಿಸಿಕೊಳ್ಳಲು ಕ್ರಮವಹಿಸುವಂತೆ ಸೂಚನೆ ನೀಡಿದರು.


ಭಾಗಮಂಡಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದಿವಾಕರ್, ಮತದಾರರ ಸಹಾಯವಾಣಿ ಆಪ್ ಮೂಲಕ ಯಾವ ರೀತಿ ನೋಂದಾಯಿಸಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.


ಸಭೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಜೆನಿಫರ್ ಲೋಲಿಟ, ಪದವಿ ಪೂರ್ವ ಕಾಲೇಜಿನ ಉಪನಿರ್ದೇಶಕ ಪುಟ್ಟರಾಜು, ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಶಿರಸ್ತೆದಾರ್ ಪ್ರಕಾಶ್, ಚುನಾವಣೆ ಶಾಖೆಯ ಅನಿಲ್, ಇತರರು ಇದ್ದರು.