ಜಿಲ್ಲೆ

ಶೇ.50 ಹಾಸಿಗೆ ಮೀಸಲು ಕಡ್ಡಾಯ ; ಅಪರ ಜಿಲ್ಲಾಧಿಕಾರಿ ಜಗದೀಶ.ಕೆ.ನಾಯಕ್ ಸೂಚನೆ

Bengaluru Rural

ಬೆಂ. ಗ್ರಾಮಾಂತರ ಜಿಲ್ಲೆ : ಕರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಹಾಸಿಗೆಯನ್ನು ಕೋವಿಡ್ ಸೋಂಕಿತರಿಗೆ ಕಡ್ಡಾಯವಾಗಿ ಮೀಸಲಿರಿಸಿ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಬೆಂ.ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಡಾ. ಜಗದೀಶ.ಕೆ.ನಾಯಕ್ ಸೂಚಿಸಿದರು.

ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕರೊನಾ ಎರಡನೇ ಅಲೆ ತಡೆಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದರು. ತಾಲೂಕಿನ ವೈದ್ಯಾಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಖಾಸಗಿ ಆಸ್ಪತ್ರೆಗಳು, ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಸೇರಿ ಸಮಾಜ ಕಲ್ಯಾಣ ಇಲಾಖೆ ವಸತಿ ಗೃಹಗಳನ್ನು ಕರೊನಾ ರೋಗಿಗಳಿಗೆ ಮೀಸಲಿರಿಸಿ, ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಸೂಚನೆ ನೀಡಿದರು. 45 ವರ್ಷ ಮೇಲ್ಪಟ್ಟ ವಯಸ್ಸಿನವರೆಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಯಾವುದೇ ಪೂರ್ವಗ್ರಹ ಪೀಡಿತರಾಗದೆ, ವದಂತಿಗಳಿಗೆ ಕಿವಿಗೊಡದೆ ಲಸಿಕೆ ಪಡೆಯಬಹುದು ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಖಚಿತಪಡಿಸಿಕೊಳ್ಳಿ : ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ನೀಡುವ ಮುನ್ನ ಲಸಿಕೆ ಪಡೆಯುವವರಿಗೆ ಪ್ರಾಥಮಿಕ ತಪಾಸಣೆ ನಡೆಸಿ, ಆರೋಗ್ಯವಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಲಸಿಕೆ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ ತಿಳಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಭರ್ತಿಯಾದ ನಂತರ ಸೋಂಕಿತರನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಬೇಕು ಎಂದು ವೈದ್ಯರಿಗೆ ಸೂಚಿಸಿದರು. ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ.ಗೀತಾಬಾಲಿ, ವಿಶ್ವ ಆರೋಗ್ಯ ಸಂಸ್ಥೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ.ನಾಗರಾಜ್, ವೈದ್ಯಾಧಿಕಾರಿಗಳಾದ ಶ್ರೀನಿವಾಸ್, ಧರ್ಮೇಂದ್ರ ಮತ್ತಿತರರು ಇದ್ದರು.

ಸುಳ್ಳು ಮಾಹಿತಿ ನೀಡಿದರೆ ಕ್ರಮ:ಜಿಲ್ಲೆಯಲ್ಲಿನ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದ್ದು, ಕರೊನಾ ಸೋಂಕಿತರಿಗೆ ಶೇ.50 ಹಾಸಿಗೆಗಳನ್ನು ಮೀಸಲಿಡುವ ಜತೆಗೆ ತ್ವರಿತವಾಗಿ ಚಿಕಿತ್ಸೆ ನೀಡಬೇಕು ಎಂದು ಆದೇಶ ಹೊರಡಿಸಲಾಗಿದೆ. ಏತನ್ಮಧ್ಯೆ ಯಾವುದೇ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ದೊರಕಿಸಿಕೊಡುವಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಅಥವಾ ಹಾಸಿಗೆ ಕೊರತೆ ಬಗ್ಗೆ ಸುಳ್ಳು ಮಾಹಿತಿ ನೀಡಿ ರೋಗಿಯನ್ನು ದಾಖಲಿಸಿಕೊಳ್ಳಲು ಮೀನಮೇಷ ಎಣಿಸಿದರೆ ಅಂಥ ಆಸ್ಪತ್ರೆಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್ ಎಚ್ಚರಿಕೆ ನೀಡಿದರು. ತಾಲೂಕು ಮಟ್ಟದ ವೈದ್ಯಾಧಿಕಾರಿಗಳು ಪ್ರತಿದಿನ ಆಸ್ಪತ್ರೆಗಳ ವಿವರ ದಾಖಲಿಸಬೇಕು, ಎಷ್ಟು ಸೋಂಕಿತರು ದಾಖಲಾಗಿದ್ದಾರೆ, ಚಿಕಿತ್ಸೆ ಹೇಗೆ ದೊರೆಯುತ್ತದೆ ಎಂಬುದರ ಪ್ರತಿಯೊಂದು ಮಾಹಿತಿ ಬಗ್ಗೆ ನಿಗಾವಹಿಸಬೇಕು ಎಂದು ತಾಕೀತು ಮಾಡಿದರು.