ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರದ ಖಾಸಗಿ ಕಾರ್ಖಾನೆಯೊಂದರಲ್ಲಿ ರಾಸಾಯನಿಕ ಸೋರಿಕೆಯಾಗಲಿದೆ..! ಇದರಿಂದ ದೊಡ್ಡ ಅನಾಹುತ ಸಂಭವಿಸಲಿದೆ..? ಜಿಲ್ಲಾಡಳಿತ ಹಾಗೂಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಆ ಅನಾಹುತವನ್ನು ಯಶಸ್ವಿಯಾಗಿ ನಿಭಾಯಿಸಲಿದೆ..
ಅರೇ ರಾಸಾಯನಿಕ ಸೋರಿಕೆಯಾಗುವುದು, ಅನಾಹುತ ಸಂಭವಿಸುವುದು..ಇದು ಮೊದಲೇ ತಿಳಿಯುತ್ತದೆಯೇ ಅದನ್ನು ನಿಭಾಯಿಸಲು ಸಿದ್ದತೆ ನಡೆದಿರುತ್ತದೆಯೇ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಹೌದು.! ಇದು ಕಲ್ಪಿತ ಪ್ರದರ್ಶನವಾಗಿದೆ. ದೊಡ್ಡಬಳ್ಳಾಪುರ ತಾಲೂಕು ಕೈಗಾರಿಕಾ ಪ್ರದೇಶವಾಗಿರುವುದರಿಂದ ಈ ಭಾಗದಲ್ಲಿ ಸಂಭವನೀಯ ವಿಪತ್ತುಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಲ್ಪಿತ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದೆ.
ಸೆ.23ರಂದು ಪ್ರದರ್ಶನ: ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಎನ್‌ಡಿಆರ್‌ಎ್ ಸಹಯೋಗದಲ್ಲಿ ದೊಡ್ಡಬಳ್ಳಾಪುರದ ಮುಸಾಶಿ ಆಟೋ ಪಾರ್ಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೆ.23 ರಂದು ಬೆಳಿಗ್ಗೆ 11 ಗಂಟೆಗೆ ಆ್ಸೈಟ್ ರಾಸಾಯಿನಿಕ ಸೋರಿಕೆ ಕಲ್ಪಿತ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಆಕಸ್ಮಿಕವಾಗಿ ಸಂಭವಿಸಬಹುದಾದ ನೈಸರ್ಗಿಕ ವಿಕೋಪಗಳು, ಕೈಗಾರಿಕಾ ಪ್ರದೇಶ ವ್ಯಾಪ್ತಿಗಳಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು, ವಿಕೋಪಗಳಿಂದ ಆಗುವಂತಹ ಅನಾಹುತಗಳನ್ನು ತಪ್ಪಿಸಲು, ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸೈಯದಾ ಆಯಿಷಾ ತಿಳಿಸಿದ್ದಾರೆ.ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕಲ್ಪಿತ ಪ್ರದರ್ಶನದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಅಧಿಕಾರಿಗಳಿ ಜವಾಬ್ದಾರಿ: ಕಲ್ಪಿತ ಪ್ರದರ್ಶನ ಆಗುವಂತಹ ಸಂದರ್ಭದಲ್ಲಿ ಅವಶ್ಯಕತೆ ಇರುವ ತುರ್ತು ಆಂಬುಲೆನ್ಸ್ ಹಾಗೂ ಆರೋಗ್ಯ ಸೇವೆ, ಅಗ್ನಿ ಶಾಮಕದಳ, ಟ್ರಾಫಿಕ್ (ಸಂಚಾರ ಸಿಕ್ಕು)ನಿಯಂತ್ರಣ, ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ, ಬಂದೋಬಸ್ತ್ ವ್ಯವಸ್ಥೆ, ಪುನರ್ವಸತಿ ಕೇಂದ್ರ ಕುರಿತು ಆಯಾ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಯಿತು. ಪ್ರದರ್ಶನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ವಹಿಸಿರುವ ಕರ್ತವ್ಯವನ್ನು ನಿರ್ವಹಿಸಿ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.