ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸಮೀಕ್ಷೆಯನ್ನು ಸರಿಯಾದ ಕ್ರಮದಲ್ಲಿ ಮಾಡಬೇಕು, ಯಾವುದೇ ಲೋಪವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಶಾ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಸಾಮಾಜಿಕ ನ್ಯಾಯವನ್ನು ಎಲ್ಲ ವರ್ಗದವರಿಗೂ ಒದಗಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು ಪರಿಶಿಷ್ಟ ಜಾತಿ ಒಳಮೀಸಲಾತಿ ಸಮಿಕ್ಷೆಯನ್ನು ಮೇ 5 ರಿಂದ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಗಣತಿದಾರರು ಮನೆ ಮನೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸಲಿದ್ದಾರೆ, ದತ್ತಾಂಶ ಸಂಗ್ರಹದಲ್ಲಿ ಲೋಪವಾಗದಂತೆ ಸರಿಯಾದ ಕ್ರಮದಲ್ಲಿ ಸಮೀಕ್ಷೆ ಮಾಡಬೇಕು ಈ ವಿಷಯಲ್ಲಿ ನಿರ್ಲಕ್ಷ್ಯ ಅಥವಾ ಉದಾಸೀನ ಪ್ರದರ್ಶನವಾಗಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಮೀಕ್ಷೆಗೆ ಅಪ್ಲಿಕೇಷನ್: ಸಮೀಕ್ಷೆ ನಡೆಸಲು ಸರ್ಕಾರದಿಂದ ಅಪ್ಲಿಕೇಶನ್ ಸಿದ್ದಪಡಿಸಲಾಗಿದ್ದು, ಸಮಿಕ್ಷೆಯಲ್ಲಿ ಬರುವ ತಾಂತ್ರಿಕ ತೊಂದರೆ ಹಾಗೂ ಅದಕ್ಕೆ ಪೂರಕ ಪರಿಹಾರವನ್ನು ಪಡೆದುಕೊಳ್ಳಲು ಅಧಿಕಾರಿಗಳು ಗಮನ ನೀಡಬೇಕು, ಈ ತರಬೇತಿಯಲ್ಲಿ ಅಪ್ಲೀಕೇಶನ್ ನಿರ್ವಹಣೆ, ಹೇಗೆ ದತ್ತಾಂಶ ಸಂಗ್ರಹಿಸಿ ನಮೂದಿಸಬೇಕು ಎಂಬ ಸಂಪೂರ್ಣ ಮಾಹಿತಿ ಇದೆ. ದತ್ತಾಂಶದಲ್ಲಿ ಏರುಪೇರಾದರೇ ಸರ್ಕಾರದಿಂದ ಸಿಗುವ ರಾಜಕೀಯ, ಶಿಕ್ಷಣ, ಉದ್ಯೊಗ, ಸೇರಿ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು. ಮನೆ ಮನೆಗೆ ಭೇಟಿ ನೀಡಿ ಸಮಿಕ್ಷೆ ಮಾಡಿ ದತ್ತಾಂಶ ಸರಿಯಾದ ಕ್ರಮದಲ್ಲಿ ಸಂಗ್ರಹಿಸಬೇಕು. ಸುಭದ್ರ ಪ್ರಜಾಪ್ರಭುತ್ವಕ್ಕೆ ನೀವೆಲ್ಲರು ನೀಡುವ ದತ್ತಾಂಶ ಮುಖ್ಯವಾಗಿದೆ ಎಂದರು.
ಸಮೀಕ್ಷೆಯ ವಿಧಾನ ಮತ್ತು ವೇಳಾಪಟ್ಟಿ ವಿವರ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಗೆ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಿಸಲಾಗುವುದು. ಮೊದಲ ಹಂತದಲ್ಲಿ ಮೇ 5 ರಿಂದ 17 ವರೆಗೆ ಗಣತಿದಾರರು ಮನೆ ಮನೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳುವರು. ಎರಡನೇ ಹಂತದಲ್ಲಿ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳುವರು. ಮೂರನೇ ಹಂತದಲ್ಲಿ ಮೇ 19 ರಿಂದ 23 ರ ವರೆಗೆ ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮಾಡಬಹುದಾಗಿದೆ ಎಂದು ವಿವರಿಸಿದರು.ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಸಮಿಕ್ಷೆ ಕುರಿತ ತಾಲೂಕು ಮಟ್ಟದ ಮಾಸ್ಟರ್‌ಟ್ರೈನರ್‌ಗಳ ತರಬೇತಿ ಕಾರ್ಯಗಾರ ಇದಾಗಿದ್ದು ಈ ಕಾರ್ಯಗಾರದಲ್ಲಿ ಎಲ್ಲ ಮಾಹಿತಿ ಪಡೆಯಬೇಕು ತಿಳಿಯದ ವಿಷಯವನ್ನು ಮತ್ತೆ ಮನನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.