ಮೈಸೂರು: ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿ ಹಾಗೂ ಸೌಹಾರ್ದಯುತ ಹಬ್ಬವಾಗಿ ಆಚರಿಸುವಂತೆ ಗಮನಹರಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು ಹೇಳಿದರು.
ಗಣೇಶ ಹಬ್ಬದ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸ್ಥಳೀಯ ಸಂಘ, ಸಂಸ್ಥೆಗಳು, ಪರಿಸರ ಇಲಾಖೆ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಿಒಪಿ ಮೂರ್ತಿಗಳು ಬೇಡ:
ಪಿಒಪಿಯಿಂದ ನಿರ್ಮಿಸಿದ ಗಣೇಶ ಮೂರ್ತಿಗಳನ್ನು ಯಾವುದೇ ಕಾರಣಕ್ಕೂ ಪ್ರತಿಷ್ಠಾಪಿಸಬಾರದು. ಈ ನಿಟ್ಟಿನಲ್ಲಿ ಎಚ್ಚರ ವಹಿಸಬೇಕು. ಪಿಒಪಿಯಿಂದ ನಿರ್ಮಿಸಿರುವ ಹಾಗೂ ಬಣ್ಣಲೇಪಿತ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಿದಾಗ ವಿಷಕಾರಿ ರಾಸಾಯನಿಕಗಳು ಜಲಮೂಲಗಳಿಗೆ ಸೇರುತ್ತವೆ. ಕೆರೆ, ಬಾವಿ, ಹಳ್ಳ ನೀರು ಕಲುಷಿತಗೊಳ್ಳುತ್ತದೆ. ಇದು ಜಲಚರ ಹಾಗೂ ಮಾನವರಿಗೆ ಅತ್ಯಂತ ಹಾನಿಕರ. ಆದ್ದರಿಂದ ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನೇ ಪ್ರತಿಷ್ಠಾಪನೆ ಮಾಡಲು ಅರಿವು ಮೂಡಿಸಬೇಕು. ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು ಹೇಳಿದರು.
ವಿಸರ್ಜನೆಯೂ ಮುಖ್ಯ:
ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಅನುಕೂಲವಾಗುವಂತೆ ಸ್ಥಳೀಯ ಸಂಸ್ಥೆಗಳು ಕೆರೆ, ನದಿ ಪಾತ್ರಗಳಲ್ಲಿ ಸ್ಥಳಗಳನ್ನು ಮೊದಲೇ ನಿಗದಿಪಡಿಸಬೇಕು. ಪೂಜೆಗೆ ಬಳಸಿದ ಹೂವು ಸೇರಿದಂತೆ ಮತ್ತಿತರ ತ್ಯಾಜ್ಯಗಳನ್ನು ನೀರಿನಲ್ಲಿ ಹಾಕಬಾರದು. ಪ್ರತ್ಯೇಕವಾಗಿ ಶೇಖರಣೆಗೆ ಸಂಗ್ರಹಣಾ ಘಟಕಗಳನ್ನು ಅಳವಡಿಸಬೇಕು ಎಂದು ಡಾ. ಪಿ.ಶಿವರಾಜು ಅಧಿಕಾರಿಗಳಿಗೆ ತಿಳಿಸಿದರು.
ಪೂರ್ವಾನುಮತಿ ಕಡ್ಡಾಯ:
ಸಾರ್ವಜನಿಕವಾಗಿ ಇಡಲಾಗುವ ಗೌರಿ ಹಾಗೂ ಗಣೇಶ ವಿಗ್ರಹಗಳನ್ನು ಪ್ರತಿ ಸಮಿತಿಯವರು ಕಡ್ಡಾಯವಾಗಿ ಸಂಬಂಧಪಟ್ಟ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಥವಾ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆದ ನಂತರವೇ ಪ್ರತಿಷ್ಠಾಪಿಸಬೇಕು. ಇದನ್ನು ಸೂಕ್ತವಾಗಿ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
*
ಪ್ಲಾಸ್ಟಿಕ್ ಬಳಸದಂತೆ ಷರತ್ತುವಿಧಿಸಿ:
ಅನುಮತಿ ನೀಡುವ ಪತ್ರಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ತೋರಣ, ಪ್ಲಾಸ್ಟಿಕ್ ಪ್ಲೆಕ್ಸ್ ಮುಂತಾದ ವಸ್ತುಗಳನ್ನು ಬಳಸಬಾರದು. ಸಮಿತಿಗಳಿಗೆ ಈ ಬಗ್ಗೆ ಷರತ್ತು ವಿಧಿಸಬೇಕು. ಪೆಂಡಾಲ್ ಸಮಿತಿಯವರು ರಾತ್ರಿ 10 ರಿಂದ ಬೆಳಗ್ಗೆ 6 ರ ತನಕ ಧ್ವನಿವರ್ಧಕಗಳ ಬಳಕೆ ಮಾಡಬಾರದು. ಪಾರಂಪರಿಕ ಗೌರಿ-ಗಣೇಶ ಮೂರ್ತಿ, ಮನೆಯಲ್ಲಿ ವಿಗ್ರಹಗಳನ್ನು ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸುವುದು ಉತ್ತಮ ಎಂದು ಎಡಿಸಿ ಸಲಹೆ ನೀಡಿದರು.
*
ನಿಗದಿತ ಟ್ಯಾಂಕರ್ ಬಳಸಿಕೊಳ್ಳಿ:
ಸರ್ಕಾರಿ ಅಥವಾ ಖಾಸಗಿ ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗೌರಿ-ಗಣೇಶ ಮೂರ್ತಿಗಳನ್ನು ಅತಿ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ಮೈಸೂರು ಮಹಾನಗರ ಸಂಸ್ಥೆಗಳ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದೊರಕಿಸಿಕೊಡಲಾಗುವ ಸ್ಥಳೀಯ ಹೊಂಡ ಅಥವಾ ಸಂಚಾರಿ ವಿಸರ್ಜನಾ ವ್ಯವಸ್ಥೆ, ಅಥವಾ ನಿಗದಿತ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಸೂಚನೆ ನೀಡಿದರು.
ಕಸ ಬೇರ್ಪಡಿಸಿ:
ನೈಸರ್ಗಿಕ, ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಪೂಜಾ ಸಾಮಗ್ರಿಗಳ ಜತೆಗಿರುವ ಹಸಿ ಕಸವನ್ನು (ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ ಇತ್ಯಾದಿ ಅಲಂಕಾರಿಕ ವಸ್ತುಗಳು) ಪ್ರತ್ಯೇಕಿಸಬೇಕು. ಸ್ಥಳೀಯ ಸಂಸ್ಥೆ, ಕಸವಿಲೇವಾರಿ ವ್ಯವಸ್ಥೆಗೆ ಅವುಗಳನ್ನು ನೀಡಬೇಕು. ನಿಗದಿತ ಪ್ರದೇಶದಲ್ಲಿ ಸ್ಥಾಪಿಸಲಾಗುವ ಸಾರ್ವಜನಿಕ ಗೌರಿ ಹಾಗೂ ಗಣೇಶ ಮೂರ್ತಿಯ ವಿಗ್ರಹಗಳನ್ನು ವಿಲೇವಾರಿ ಮಾಡಲು ಜಲ ಮೂಲಗಳನ್ನು ನಿಗದಿಪಡಿಸಬೇಕು ಎಂದು ಎಡಿಸಿ ಹೇಳಿದರು.
*
ಕಠಿಣ ಕಾನೂನು ಕ್ರಮ:
ನಿಯಮಗಳನ್ನು ಉಲ್ಲಂಘಿಸಿ ಪ್ಲಾಸ್ಟರ್ ಆಫ್ ಪ್ಯಾರಿಸ್, ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಮೂರ್ತಿಗಳನ್ನು ಸಾಗಾಟ, ಮಾರಾಟ, ಪ್ರತಿಷ್ಠಾಪನೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು ಇದೇ ಸಂದರ್ಭ ಖಡಕ್ ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ (ಮೈಸೂರು ನಗರ) ಕುಮಾರ್, ಪರಿಸರ ಅಧಿಕಾರಿ (ಮೈಸೂರು ಗ್ರಾಮಾಂತರ) ವಿ.ಸುನೀಲ್ , ನಗರಪಾಲಿಕೆಯ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು. ಇದೇ ಸಂದರ್ಭ ‘ಮಾರ್ಗದರ್ಶಿ ಕೈಪಿಡಿ’ ಯನ್ನು ಬಿಡುಗಡೆಗೊಳಿಸಲಾಯಿತು.