ಜಿಲ್ಲೆ

ದೇವದುರ್ಗದಲ್ಲಿ ಟೋಲ್‌ಗೇಟ್ ರದ್ದುಮಾಡಿ

ದೇವದುರ್ಗ: ತಾಲೂಕಿನ ಕಾಕರಗಲ್ ಹಾಗೂ ಜಾಲಹಳ್ಳಿಯಲ್ಲಿ ಪ್ರಾರಂಭ ಮಾಡುತ್ತಿರುವ ಟೋಲ್‌ಗೇಟ್ ರದ್ದು ಮಾಡುವಂತೆ ಒತ್ತಾಯಿಸಿ ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ದುರುಗೇಶಗೆ ರಾಜ್ಯ ರೈತ ಸಂಘ ಶುಕ್ರವಾರ ಮನವಿ ಸಲ್ಲಿಸಿತು.

ದೇವದುರ್ಗ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ರೈತರು, ಕೂಲಿಕಾರರು, ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಕಲ್ಮಲಾ ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಯಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಕೇವಲ 73ಕಿ.ಮೀ. ವ್ಯಾಪ್ತಿಯಲ್ಲಿ ಎರಡು ಟೋಲ್‌ಗೇಟ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದು ತಾಲೂಕಿನ ಜನರ ಆತಂಕಕ್ಕೆ ಕಾರಣವಾಗಿದೆ.

ತಾಲೂಕಿನಲ್ಲಿ ಅತಿಹೆಚ್ಚು ಹಳ್ಳಿಗಳು, ತಾಂಡಾ, ದೊಡ್ಡಿಗಳಿದ್ದು ಜನರು, ಯುವಕರು ಕೆಲಸವಿಲ್ಲದೆ ಮಹಾನಗರಗಳಿಗೆ ಗುಳೆ ಹೋಗಿದ್ದಾರೆ. ಜಿಲ್ಲೆಯ ಹಲವು ತಾಲೂಕುಗಳು ದೇವದುರ್ಗಕ್ಕಿಂತ ಮುಂದುವರಿದಿದ್ದು ಅತಿಹೆಚ್ಚು ವಾಹನಗಳ ಓಡಾಟವಿದೆ. ಆದರೆ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲದ ಟೋಲ್‌ಗೇಟ್ ಇಲ್ಲಿ ಯಾಕೆ ನಿರ್ಮಿಸುತ್ತಿದ್ದಾರೆ. ಇದು ತಾಲೂಕಿನ ಜನರಿಗೆ ಮಾಡುತ್ತಿರುವ ದ್ರೋಹವಾಗಿದೆ. ನಿರ್ಮಾಣ ಹಂತದಲ್ಲಿರುವ ಎರಡೂ ಟೋಲ್‌ಗೇಟ್‌ಗಳನ್ನು ರದ್ದುಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ವಿವಿಧ ಸಂಘಟನೆಗಳು, ರೈತರ ಜತೆಗೂಡಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.