ಜಿಲ್ಲೆ

ಅದಾನಿ ಸಮೂಹದಲ್ಲಿ ವಹಿವಾಟು; ಪ್ರಧಾನಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Shivamogga

ಶಿವಮೊಗ್ಗ: ಅದಾನಿ ಸಮೂಹದಲ್ಲಿ ಕೇಂದ್ರ ಸರ್ಕಾರವು ಸಾರ್ವಜನಿಕ ಉದ್ದಿಮೆಗಳ ಮೂಲಕ ಅಪಾಯಕಾರಿ ವಹಿವಾಟು ನಡೆಸಿದೆ ಎಂದು ಆರೋಪಿಸಿ ಸೋಮವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಬಿ.ಎಚ್.ರಸ್ತೆಯಲ್ಲಿರುವ ಎಸ್‌ಬಿಐ ಶಾಖೆ ಎದುರು ಪ್ರತಿಭಟನೆ ನಡೆಸಿದರು.

ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಎನ್.ರಮೇಶ್ ನೇತೃತ್ವದಲ್ಲಿ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಗಾಂಧಿಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತದ ಮಾರ್ಗವಾಗಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರವೇಶದಲ್ಲೇ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.

ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಆಪ್ತರಿಗೆ ಲಾಭ ಮಾಡಿಕೊಡಲು ಜನಸಾಮಾನ್ಯರು ಕಷ್ಟಪಟ್ಟು ಗಳಿಸಿ ಉಳಿಸಿದ ಹಣವನ್ನು ಅದಾನಿ ಸಮೂಹದಲ್ಲಿ ಕರಗಿಸಿದ್ದಾರೆ. ಕೇಂದ್ರ ಸರ್ಕಾರದ ನೀತಿಗಳಿಂದ ಎಲ್‌ಐಸಿಯ ಬರೋಬ್ಬರಿ 29 ಕೋಟಿ ಪಾಲಿಸಿದಾರರು ಮತ್ತು ಎಸ್‌ಬಿಐನ 45 ಕೋಟಿ ಖಾತೆದಾರರು ಆತಂಕದಲ್ಲಿದ್ದಾರೆ ಎಂದು ದೂರಿದರು.

ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಲು ಬಲವಂತ ಮಾಡಿದ ಪರಿಣಾಮ ಎಲ್‌ಐಸಿಯ 39 ಕೋಟಿ ಪಾಲಿಸಿದಾರರು ಬರೋಬ್ಬರಿ 33,060 ಕೋಟಿ ರೂ. ಕಳೆದುಕೊಂಡಿದ್ದಾರೆ. ಎಸ್‌ಬಿಐ ಕೂಡ ಅದಾನಿ ಕಂಪನಿಗೆ ಭಾರಿ ಮೊತ್ತದ ಸಾಲ ನೀಡಿದ್ದು ಭಾರತೀಯ ಬ್ಯಾಂಕ್‌ಗಳಿಗೆ 80 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ಕಿಡಿಕಾರಿದರು.

ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಪ್ರಮುಖರಾದ ಕವಿತಾ, ಎಲ್.ಸತ್ಯನಾರಾಯಣ, ಎಸ್.ಪಿ.ದಿನೇಶ್, ಪಿ.ಒ.ಶಿವಕುಮಾರ್, ಎಸ್.ಕೆ.ಮರಿಯಪ್ಪ, ಇಸ್ಮಾಯಿಲ್ ಖಾನ್, ಜಿ.ಪಲ್ಲವಿ, ಎಸ್.ಪಿ.ಶೇಷಾದ್ರಿ, ಸಿ.ಎಸ್.ಚಂದ್ರಭೂಪಾಲ್, ದೀಪಕ್ ಸಿಂಗ್, ವಿಜಯಲಕ್ಷ್ಮೀ ಪಾಟೀಲ್, ಬಾಲಾಜಿ, ಎಚ್.ಪಿ.ಗಿರೀಶ್, ಪ್ರವೀಣ್‌ಕುಮಾರ್, ಕೆ.ರಂಗನಾಥ, ಶಿವಾನಂದ್, ಮಧು, ಲೋಕೇಶ್, ನಾಗರಾಜ್ ಇತರರಿದ್ದರು.