ಜಿಲ್ಲೆ

ಅದಾನಿ, ಅಂಬಾನಿ ಮಾತ್ರ ಅರ್ಥಿಕತೆಯಲ್ಲ

ಅವಿನಾಶ್ ಜೈನಹಳ್ಳಿ

ಮೈಸೂರು: ಅದಾನಿ ಹಾಗೂ ಅಂಬಾನಿ ಅವರಿಂದ ಮಾತ್ರ ದೇಶದ ಆರ್ಥಿಕತೆಯಲ್ಲ, ಎಂಎಸ್‌ಎಂಇ ಕೈಗಾರಿಕೆಗಳಿಂದಲೂ ದೇಶದ ಆರ್ಥಿಕತೆ ನಿಂತಿದೆ ಎಂದು ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಹೇಳಿದರು.

ಬೆಂಗಳೂರಿನ ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ, ಭಾರತ ಸರಕಾರದ ಎಂಎಸ್‌ಎಂಇ ಸಚಿವಾಲಯದ ಸಹಯೋಗದಲ್ಲಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಅಧಿಕಾರಿಗಳು ಮಾರ್ಗದರ್ಶನ ಮಾಡಿದರೆ ನವ ಉದ್ಯಮಿಗಳು ಉತ್ತಮ ಉದ್ಯೋಗಿಗಳಾಗಿ ಬೆಳೆಯುತ್ತಾರೆ. ಉದ್ಯಮ ಸ್ಥಾಪನೆ ಮಾಹಿತಿಗಳು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ, ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆಯಾಗಬೇಕು. ಬ್ಯಾಂಕ್‌ಗಳು, ಉದ್ಯಮ ಸ್ಥಾಪನೆಗೆ ಸಹಕಾರ ನೀಡುವ ಸರಕಾರಿ ಕಚೇರಿಗಳು, ಸಣ್ಣ ಉದ್ಯಮಿಗಳಿಗೆ ಅವಕಾಶ ನೀಡಿ, ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.

ಸಿಐಐ ಮಾಜಿ ಅಧ್ಯಕ್ಷ ಡಾ.ಎನ್.ಮುತ್ತುಕುಮಾರ್ ಮಾತನಾಡಿ, ಉದ್ಯಮಿಯಾಗಲು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು, ಕೈಗಾರಿಕೆ ಸ್ಥಾಪಿಸಿ ಯಶಸ್ವಿ ಆಗಿರುವ ಉದ್ಯಮಿಗಳಿಂದ ಮಾರ್ಗದರ್ಶನ ಪಡೆಯಬೇಕು. ಉದ್ಯಮ ಸ್ಥಾಪನೆ ಮಾಡಿ, ತಾಳ್ಮೆ ವಹಿಸಬೇಕು ಎಂದು ಹೇಳಿದರು.
ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ಜಂಟಿ ನಿರ್ದೇಶಕ ಡಾ.ಕೆ.ಸಾಕ್ರಟೀಸ್, ಉಪ ನಿರ್ದೇಶಕರಾದ ಗೋಪಿನಾಥ್ ರಾವ್, ಎಂ.ಶಶಿಕುಮಾರ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ದಿನೇಶ್, ವಿದ್ಯಾವರ್ಧಕ ಟ್ರಸ್ಟ್‌ನ ಕಾರ್ಯದರ್ಶಿ ವಿಶ್ವನಾಥ್, ಪ್ರಾಂಶುಪಾಲ ಡಾ.ಬಿ.ಎಸ್.ಸದಾಶಿವೇಗೌಡ , ಎಂಸಿಸಿಯ ಉಪಾಧ್ಯಕ್ಷ ಆರ್.ಆನಂದ್, ಜಂಟಿ ಕಾರ್ಯದರ್ಶಿ ವಿನೋದ್ ಜೈನ್, ಕಾರ್ಯದರ್ಶಿ ಎ.ಕೆ.ಶಿವಾಜಿ ರಾವ್, ಖಜಾಂಚಿ ಎಸ್.ಜೆ.ಅಶೋಕ್ ಇದ್ದರು.

ವಸ್ತು ಪ್ರದರ್ಶನದಲ್ಲಿ ನೈರುತ್ಯ ರೈಲ್ವೆ ವಿಭಾಗ, ಯೂನಿಯನ್ ಬ್ಯಾಂಕ್, ಸಿರಿಧಾನ್ಯಗಳ ಭಂಡಾರ, ಇಂಡಿಯನ್ ಬ್ಯಾಂಕ್, ನಂಬಿಕೆ ಸಿರಿಧಾನ್ಯ ಮತ್ತು ಆಹಾರ ಪದಾರ್ಥಗಳ ಮಾರಾಟ ಕೇಂದ್ರ ಸೇರಿದಂತೆ ವಿವಿಧ ಸಂಸ್ಥೆಗಳ 60ಕ್ಕೂ ಹೆಚ್ಚು ಸ್ಟಾಲ್‌ಗಳು ಭಾಗಿಯಾಗಿದ್ದವು. ಇವು ಯುವ ಸಮುದಾಯಕ್ಕೆ ಸ್ವ ಉದ್ಯೋಗ ಆರಂಭಿಸಲು ಹಾಗೂ ಅಗತ್ಯ ಬೇಕಾದ ಸಾಲ ಸೌಲಭ್ಯಗಳ ಮಾಹಿತಿಯನ್ನು ನೀಡಿದವು.