ಕಲಾದಗಿಯಲ್ಲಿರುವ ಐತಿಹಾಸಿಕ ಬ್ರಿಟಿಷ್ ಗೋರಿಗಳ ಸಮೂಹವನ್ನು ಲೇಖಕ ಅಡ್ಡಂಡ ಕಾರ್ಯಪ್ಪ ವೀಕ್ಷಿಸಿದರು. ಹಿಂದು ಜಾಗರಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ ಹಿರೇಮಠ, ಜಿಲ್ಲಾ ಸಂಯೋಜಕ ಮಲ್ಲು ಕುಂಬಾರ,ಯುವ ಮುಖಂಡ ಬಶೆಟ್ಟೆಪ್ಪ ಅಂಗಡಿ ಇತರರಿದ್ದರು. 
ಜಿಲ್ಲೆ

ಬ್ರಿಟಿಷ್ ಗೋರಿಗಳನ್ನು ವೀಕ್ಷಿಸಿದ ಲೇಖಕ ಅಡ್ಡಂಡ ಕಾರ್ಯಪ್ಪ

ಕಲಾದಗಿ: ಗ್ರಾಮದಲ್ಲಿರುವ ಐತಿಹಾಸಿಕ ಸ್ಮಾರಕ ‘ಬ್ರಿಟಿಷರ ಗೋರಿಗಳ ಸಮೂಹ’ವನ್ನು ಲೇಖಕ ಅಡ್ಡಂಡ ಕಾರ್ಯಪ್ಪ ಮಂಗಳವಾರ ವೀಕ್ಷಿಸಿದರು.

ಹಿಂದು ಜಾಗರಣಾ ವೇದಿಕೆ ಕಾರ್ಯಕ್ರಮವೊಂದಕ್ಕೆ ಗ್ರಾಮಕ್ಕಾಮಿಸಿದ್ದ ಅವರು, ಬ್ರಿಟಿಷರ ಗೋರಿಗಳ ಸಮೂಹ ನೋಡುವ ಇಂಗಿತವನ್ನು ಸಂಘಟಕರ ಬಳಿ ವ್ಯಕ್ತಮಾಡಿ, ಅವರೊಂದಿಗೆ ಹೊರರಸ್ತೆ ಬಳಿಯ ಐತಿಹಾಸಿಕ ಸ್ಮಾರಕಗಳತ್ತ ತೆರಳಿದರು.

ಮುಳ್ಳುಕಂಟಿಗಳ ನಡುವೆ ದೈನ್ಯಾವಸ್ಥೆಯಲ್ಲಿರುವ 1821ರಿಂದ 64ರ ವರೆಗಿನ ಅವಧಿಯಲ್ಲಿ ಗ್ರಾಮದಲ್ಲಿದ್ದ ಸೈನ್ಯದ ಅಧಿಕಾರಿಗಳು ಮತ್ತವರ ಕುಟುಂಬದವರ ಗೋರಿ ಹಾಗೂ ಅವುಗಳ ಮೇಲೆ ಕಲ್ಲಿನಲ್ಲಿ ಕೆತ್ತಿದ ಮೃತರ ವೈಯಕ್ತಿಕ ವಿವರ ವೀಕ್ಷಿಸಿದರಲ್ಲದೆ, ಸ್ಥಳೀಯ ಇತಿಹಾಸಕ್ತ ದ.ರಾ. ಪುರೋಹಿತ ಅವರಿಂದ ಮಾಹಿತಿ ಪಡೆದರು. ಗೋರಿಗಳ ದುಸ್ಥಿತಿ, ನಿಧಿ ಆಸೆಗಾಗಿ ಕೆಲ ಗೋರಿಗಳನ್ನು ಒಡೆದು ಅವುಗಳ ಮೇಲಿದ್ದ ಮಾಹಿತಿ ಕಲ್ಲನ್ನು ಒಡೆದು ಹಾಕಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.

ನಂತರ ‘ವಿಜಯವಾಣಿ’ ಪ್ರತಿನಿಧಿಯೊಂದಿಗೆ ಮಾತನಾಡಿ, ಕಲಾದಗಿಯಲ್ಲಿದ್ದ ತಮ್ಮ ಪೂರ್ವಜರ ಗೋರಿಗಳನ್ನು ವೀಕ್ಷಿಸಲು ವಿದೇಶಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡಲೇ ಅವುಗಳನ್ನು ಸಂರಕ್ಷಿಸಲು ಮುಂದಾಗಬೇಕು ಎಂದರು.

ಎನ್‌ಎಸ್‌ಎಸ್ ಶಿಬಿರದ ಮೂಲಕ, ಇಲ್ಲವೆ ನೀವಾದರೂ ಶ್ರಮದಾನ ಮಾಡಿ ಈ ಸ್ಮಾರಕಗಳನ್ನು ರಕ್ಷಿಸಿ ಇವುಗಳ ಮಾಹಿತಿ ಫಲಕವನ್ನು ಹೊರ ರಸ್ತೆಯಲ್ಲಿ ಹಾಕಬೇಕೆಂದು ಸ್ಥಳದಲಿದ್ದ ಮುಖಂಡರಿಗೆ ಸೂಚಿಸಿದರು.

ಹಿಂದು ಜಾಗರಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ ಹಿರೇಮಠ, ಜಿಲ್ಲಾ ಸಂಯೋಜಕ ಮಲ್ಲು ಕುಂಬಾರ, ಯುವ ಮುಖಂಡ ಬಶೆಟ್ಟೆಪ್ಪ ಅಂಗಡಿ, ಕನ್ನಡ ಶಾಲೆ ಮುಖ್ಯಶಿಕ್ಷಕ ಸಿ.ಎಲ್ ಹೂಗಾರ, ಬಿ.ಎಚ್. ನಿಂಗನಗೌಡರ, ಲಕ್ಷ್ಮಣ ಮಾದರ, ಹಿಂದು ಜಾಗರಣಾ ವೇದಿಕೆ ಸ್ಥಳೀಯ ಸಂಘಟಕರು ಇದ್ದರು.