ಕಾರವಾರ: ನಿವೃತ್ತ ಪ್ರಾಂಶುಪಾಲ ಜಿ.ವಿ.ಭಟ್ ಅವರ ಸಾಧನೆ ತಿಳಿಸುವ 'ಅದಮ್ಯ ಚೇತನ ಪ್ರೊ. ಜಿ. ವಿ.ಭಟ್' ಗ್ರಂಥದ ಬಿಡುಗಡೆ ಸಮಾರಂಭವು ಜ.22 ರಂದು 10.30 ಕ್ಕೆ ದಿವೇಕರ್ ಕಾಲೇಜ್ ನಲ್ಲಿ ನಡೆಯಲಿದೆ ಎಂದು ಕಾಲೇಜ್ ನ ಪ್ರಾಂಶುಪಾಲ ಡಾ.ಕೇಶವ ಕೆ.ಜಿ.ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಖ್ಯಾತ ಸಾಹಿತಿ ಡಾ.ಜಯಂತ ಕಾಯ್ಕಿಣಿ ಮುಖ್ಯ ಅತಿಥಿಗಳಾಗಿ, ಹಿರಿಯ ಪತ್ರಕರ್ತರಾದ ಶ್ರೀ ಜಿ. ಯು. ಭಟ್ಟ, ವಿಶೇಷ ಆಮಂತ್ರಿತರಾಗಿ ಆಗಮಿಸಲಿದ್ದಾರೆ. ಕೆನರಾ ವೆಲ್ ಫೇರ್ ಟ್ರಸ್ಟ್ ನ ಅಧ್ಯಕ್ಷ ಎಸ್.ಪಿ.ಕಾಮತ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ವಿ. ಭಟ್ಟರ ಧರ್ಮಪತ್ನಿ ಅನಸೂಯಾ ಭಟ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಗ್ರಂಥದ ಸಂಪಾದಕರಾದ ಡಾ. ಜಿ.ವಿ. ಜೋಶಿ ಮತ್ತು ಆರ್. ಎಸ್. ಹಬ್ಬು ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ ಎಂದರು.
ಇದನ್ನೂ ಓದಿ: ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ 9.79 ಲಕ್ಷ ರೂ. ಖರ್ಚು
ಅವರು ಎಲ್ಲರಿಗೂ ಮಾದರಿಯಾಗಿದ್ದರು. ಕೇವಲ ಪ್ರೀತಿ ಮತ್ತು ಅನುಕಂಪಗಳಿಂದ ಜನಮನವನ್ನು ಅವರು ಗೆದ್ದಿದ್ದರು. ದಿವೇಕರ ಕಾಲೇಜಜ್ ಕಾರವಾರದ ಜನರ ಕಾಲೇಜು ಎಂಬ ಭಾವನೆ ಮೂಡುವ ರೀತಿಯಲ್ಲಿ ಅವರು ಈ ಸಂಸ್ಥೆಯನ್ನು ಬೆಳೆಸಿದ್ದು ಒಂದು ಅದ್ಭುತ ಸಾಧನೆ.
ಕಾರವಾರದ ಕಡಲ ತೀರದಲ್ಲಿ ಸುಸಜ್ಜಿತವಾದ ಪೂರ್ಣ ಪ್ರಮಾಣದ ಕಾಲೇಜು ಕಟ್ಟಡ, ಗ್ರಂಥಾಲಯ ಇವರ ನಾಯಕತ್ವದಲ್ಲಿ ರೂಪುಗೊಂಡಿವೆ. ಇಡಿ ಕಾಲೇಜು ವಾತಾವರಣವನ್ನು ತೆಂಗು ಮತ್ತು ಇತರ ಗಿಡಗಳನ್ನು ನೆಟ್ಟು ಹಸಿರಾಗಿಸಿದ ಕೀರ್ತಿ ಅವರದು.
ದಿನ ದಲಿತರ ಬಗ್ಗೆ ಕಾಳಜಿ ಹೊಂದಿದ್ದ ಅವರು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ, ಕಾಲೇಜಿನ ಸಮೀಪದ ಮೀನುಗಾರ ಕಾಲನಿಯನ್ನು ದತ್ತು ತೆಗೆದುಕೊಂಡು, ಅದರ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದರು. ಯಾವ ನಾಗರಿಕ ಸೌಕರ್ಯವೂ ಇಲ್ಲದ ಆ ಕಾಲನಿಯಲ್ಲಿ ರಸ್ತೆಗಳ ನಿರ್ಮಾಣ ಮಾಡಿದರು. ಮಾಡಿದ್ದಲ್ಲದೇ, ಏಳು ಕೊಠಡಿಗಳ ಪ್ರಾಥಮಿಕ ಶಾಲೆಯ, ಒಂದು ಚಿಕ್ಕ ಸಮುದಾಯ ಭವನ, ಇಡಿ ಕಾಲನಿಗೆ ನೀರಿನ ಪೂರೈಸಲು ತೆರೆದ ಬಾವಿ, ಶೌಚಾಲಯ ಇವೆಲ್ಲವನ್ನೂ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ನಿರ್ಮಿಸಿ, ಆ ಕಾಲನಿ ಇಂದು ಸರ್ವೋದಯ ನಗರ ಎಂದು ರೂಪುಗೊಳ್ಳುವುದಕ್ಕೆ ಪ್ರೊ. ಜಿ ವಿ ಭಟ್ ರು ಕಾರಣಿಕರ್ತರಾಗಿದ್ದಾರೆ. ಅವರು ಕಾರವಾರದ ನಗರಕ್ಕೆ ಸಲ್ಲಿಸಿದ ಸೇವೆ ಅನನ್ಯವಾದುದು. ಪ್ರೊ. ಜಿ ವಿ ಭಟ್ಟರು ಇಹ ಲೋಕವನ್ನು ತ್ಯಜಿಸಿ ಒಂದು ವರ್ಷವಾಗಿದೆ. ಆ ಸಂದರ್ಭದ ನೆನಪಿಗಾಗಿ ಮಹಾ ವಿದ್ಯಾಲಯದ ಹಳೇ ವಿದ್ಯಾರ್ಥಿಗಳ ಸಂಘವು, ಮಹಾ ವಿದ್ಯಾಲಯದೊಡನೆ ಕೈ ಜೋಡಿಸಿ, 'ಅದಮ್ಯ ಚೇತನ ಪ್ರೊ. ಜಿ ವಿ ಭಟ್', ಈ ಗ್ರಂಥವನ್ನು ಬಿಡುಗಡೆ ಮಾಡುತ್ತಿದೆ ಎಂದರು.
ಕಾಲೇಜ್ ನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿರುದ್ಧ ಹಳದೀಪುರ ಮಾತನಾಡಿ, ಅವರ ಅಭಿಮಾನಿಗಳು, ವಿದ್ಯಾರ್ಥಿಗಳು ಬರೆದಿರುವ ಹಾಗೂ ಸ್ವತಃ ಜಿ.ವಿ.ಭಟ್ ಅವರು ಬರೆದಿರುವ 45 ಲೇಖನಗಳು ಗ್ರಂಥಯದಲ್ಲಿವೆ ಎಂದು ವಿವರಿಸಿದರು.
ಹಳೆಯ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಸ್ಯಾಮ್ಸನ್ ಡಿಸೋಜಾ ಮಾತನಾಡಿ, ಜಿ.ವಿ.ಭಟ್ ಒಬ್ಬ ಅದ್ಬುತ ಶಿಕ್ಷಕ. ಅವರು ಕೇಲವ ಕಾಲೇಜ್ ಗೆ ಮಾತ್ರವಲ್ಲ. ಇಡೀ ರಾಜ್ಯಕ್ಕೆ ಮಾದರಿಯಾಗಿದ್ದರು.ಶಿಸ್ತು, ಆಡಳಿತ, ನಾಯಕತ್ವ ಮುಂತಾದ ಹಲವು ಅಂಶಗಳಿಗೆ ಅವರು ಮಾದರಿಯಾಗಿದ್ದರು ಎಂದರು. ಅವರಿಂದ ಕಲಿತ ಹಲವು ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಎಂದರು. ನಾಗೇಶ್ವರ ರಾವ್, ಗ್ರಂಥಪಾಲಕ ಸುರೇಶ ಗುಡಿಮನಿ ಇದ್ದರು. ಸುದ್ದಿಗೋಷ್ಠಿಯಲ್ಲಿದ್ದರು.