ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಕಚೇರಿಯನ್ನು ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಿದರು. ಕೆ.ಎ. ಆದಂ, ಬಸವರಾಜ್, ಶೀಲಾ ಇತರರು ಇದ್ದರು. 
ಜಿಲ್ಲೆ

ಪ್ರಾಧಿಕಾರದ ಅಧ್ಯಕ್ಷರಾಗಿ ಆದಂ ಅಧಿಕಾರ ಸ್ವೀಕಾರ

ಸೋಮವಾರಪೇಟೆ: ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಕೆ.ಎ.ಆದಂ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಪಟ್ಟಣ ಪಂಚಾಯಿತಿ ಆವರಣದಲ್ಲಿ ತೆರೆಯಲಾಗಿರುವ ಕಚೇರಿಯನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದ ಬಳಿಕ ಅಧಿಕಾರ ವಹಿಸಿಕೊಂಡ ಕೆ.ಎ.ಆದಂ ಅವರು, ಸೋಮವಾರಪೇಟೆ ಯೋಜನಾ ಪ್ರಾಧಿಕಾರ ರಚನೆಯಾದ ನಂತರದ ಪ್ರಥಮ ಅಧ್ಯಕ್ಷರಾಗಿದ್ದಾರೆ.

ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಕಾನೂನು ಚೌಕಟ್ಟಿನೊಳಗೆ ಪ್ರಾಧಿಕಾರ ಕೆಲಸ ನಿರ್ವಹಿಸಬೇಕಿದೆ. ಕಾನೂನು ಮೀರಿ ಯಾವುದೇ ಕಾರಣಕ್ಕೂ ಕೆಲಸ ಮಾಡಬಾರದು. ಅಧಿಕಾರ ಹಾಗೂ ಅವಕಾಶಗಳು ಸಿಕ್ಕಾಗ ಅದನ್ನು ಜನಸೇವೆಗೆ ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಡಿಕೇರಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದು, ಈಗಾಗಲೇ ಸೋಮವಾರಪೇಟೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಬಳಿ ನಿರ್ಮಿಸಲಾಗಿರುವ ಶತಮಾನೋತ್ಸವ ಭವನಕ್ಕೆ ಅನುದಾನ ಬಿಡುಗಡೆಯಾಗುವ ಹಂತದಲ್ಲಿದೆ. ಪಟ್ಟಣದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್‌ಗೆ ಯೋಜನೆ ರೂಪಿಸಲಾಗುವುದು. ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನ್ ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. ಪಟ್ಟಣ ಪಂಚಾಯಿತಿಯಿಂದ 5 ಎಕರೆ ಜಾಗ ಖರೀದಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ನೂತನ ಅಧ್ಯಕ್ಷ ಕೆ.ಎ.ಆದಂ ಮಾತನಾಡಿ, ಪಟ್ಟಣ ಪಂಚಾಯಿತಿಗೆ ಹೊಂದಿಕೊಂಡಿರುವ ಬೇಳೂರು ಗ್ರಾಪಂ ಹಾನಗಲ್ಲು ಹಾಗೂ ಚೌಡ್ಲು ಗ್ರಾಪಂನ ಭಾಗಶಃ ಗ್ರಾಮಗಳು ಸೇರಿ ಒಟ್ಟು 1086.67 ಹೆಕ್ಟೇರ್ ಪ್ರದೇಶ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಲಿದೆ. ಎಲ್ಲರ ಸಹಕಾರದಿಂದ ಕಾರ್ಯಚಟುವಟಿಕೆ ನಡೆಸಲಾಗುವುದು. ಪ್ರಾಧಿಕಾರದ ರಚನೆಯಿಂದ ಬಡವರು, ಶೋಷಿತರು, ಆರ್ಥಿಕವಾಗಿ ಹಿಂದುಳಿದವರಿಗೆ ನಿವೇಶನ ಪಡೆಯಲು ಸಾಧ್ಯವಾಗಿದೆ. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರಕಿಸುವುದರೊಂದಿಗೆ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಅಕ್ರಮ, ಸಕ್ರಮ ಸಮಿತಿ ಸದಸ್ಯ ಬಿ.ಬಿ.ಸತೀಶ್, ಪ್ರಾಧಿಕಾರದ ಸದಸ್ಯರಾದ ಬಿ.ಎನ್.ಬಸವರಾಜು, ಸಿ.ಪಿ.ದರ್ಶನ್, ಆರ್.ಲೋಹಿತಾಶ್ವ, ಇಂಜಿನಿಯರ್ ಸಿಂಧು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ನಾಚಪ್ಪ ಇದ್ದರು.