ಪುತ್ತೂರು: ಕಂದಾಯ ಇಲಾಖೆ, ನಗರಸಭೆಗಳ ಅದಾಲತ್, ಗ್ರಾಮ ವಾಸ್ತವ್ಯದ ಮೂಲಕ ಕಡತಗಳ ವಿಲೇವಾರಿ ಮಾಡಲಾಗುವುದು. ಪುಡಾದಲ್ಲಿ ೨ ಸಿಬ್ಬಂದಿ ನೇಮಕಕ್ಕೆ ಸರ್ಕಾರದಿಂದ ಆದೇಶ ಆಗಿದೆ. ಪುಡಾಕ್ಕೆ ಸ್ವಂತ ಕಟ್ಟಡ ನಿರ್ಮಾಣದ ಯೋಜನೆ ಇದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಶಾಸಕರ ಕಚೇರಿ ಸಭಾಂಗಣದಲ್ಲಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದಿಂದ ಆಯೋಜಿಸಲಾಗಿದ್ದ ಅದಾಲತ್ ಮತ್ತು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
೪ಕೆ ನಿಯಮಾವಳಿಗಳು ಜಾರಿಯಾಗಿರುವ ಮೊದಲು ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಮಾಡುವ ಸಂಬಂಧ ರಾಜ್ಯದಲ್ಲಿಯೇ ಪುತ್ತೂರಿನ ಪುಡಾ ಪ್ರಥಮ ಬಾರಿಗೆ ಅದಾಲತ್ ನಡೆಸುತ್ತಿದ್ದು, ಇದು ಮುಂದೆ ರಾಜ್ಯಕ್ಕೇ ಮಾದರಿಯಾಗಿ ವಿಸ್ತರಣೆಯಾಗಲಿದೆ ಎಂದರು.
ಸಾಂಕೇತಿಕವಾಗಿ ೯/೧೧ ಅರ್ಜಿ ಸಲ್ಲಿಸಿದವರಿಗೆ ಆದೇಶ ಪತ್ರ ವಿತರಿಸಲಾಯಿತು. ಪುತ್ತೂರು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಪುತ್ತೂರು ನಗರಯೋಜನಾ ಪ್ರಾಧಿಕಾರದ ಸದಸ್ಯರಾದ ನಿಹಾಲ್ ಪಿ.ಶೆಟ್ಟಿ, ಅನ್ವರ್ ಖಾಸಿಂ ಉಪಸ್ಥಿತರಿದ್ದರು.
ಪುಡಾ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಸ್ವಾಗತಿಸಿದರು. ಸದಸ್ಯ ಲ್ಯಾನ್ಸಿ ಮಸ್ಕರೇನಸ್ ವಂದಿಸಿದರು.
ಕಡತ ವಿಲೇವಾರಿ
ಪುಡಾ ಅದಾಲತ್‌ನಲ್ಲಿ ಕಡಬ ಹಾಗೂ ಪುತ್ತೂರು ತಾಲೂಕಿನ ೧೫೧ ಕಡತಗಳ ವಿಲೇವಾರಿ ನಡೆದಿದ್ದು, ಪುತ್ತೂರಿನ ೬೪ ಹಾಗೂ ಕಡಬದ ೧ ಕಡತಕ್ಕೆ ಅಂತಿಮ ಆದೇಶ ನೀಡಲಾಗಿದೆ. ಡಿಮಾಕ್ರೇಶನ್‌ನಲ್ಲಿ ೩ ಕಡತ, ಡ್ರಾಫ್ಟ್ ಲೇಜೌಟ್‌ನಲ್ಲಿ ೬ ಕಡತ, ಶುಲ್ಕ ಪಾವತಿಗೆ ೭೭ ಕಡತಗಳು ಬಾಕಿ ಉಳಿದುಕೊಂಡಿವೆ.
೯/೧೧ಗೆ ಸಂಬಂಧಿಸಿದಂತೆ ಕಾನೂನಿನಲ್ಲಿ ಬದಲಾವಣೆ ತಂದಾಗ ಗೊಂದಲ ಉಂಟಾಗಿದೆ. ನಮ್ಮಲ್ಲಿ ಪೆಂಡಿಂಗ್ -ಲ್‌ಗಳು ೨೦ ಮಾತ್ರ ಇದ್ದು, ಶೇ.೫೭ರಷ್ಟು ಅರ್ಜಿಗಳು ವಿಲೇವಾರಿಯಾಗಿವೆ. ಮುಂದೆ ಪ್ರತಿ ೬ ತಿಂಗಳಿಗೊಮ್ಮೆ ಅದಾಲತ್ ಮಾಡಿ ಅರ್ಜಿಗಳ ತ್ವರಿತ ವಿಲೇವಾರಿ ಮಾಡಲಾಗುವುದು.
| ಅಮಳ ರಾಮಚಂದ್ರ ಅಧ್ಯಕ್ಷರು,
ನಗರ ಯೋಜನಾ ಪ್ರಾಧಿಕಾರ