ಚಿಕ್ಕಬಳ್ಳಾಪುರ: ಬದಲಾದ ಜೀವನ ಶೈಲಿಯಲ್ಲಿ ಆರೋಗ್ಯ ಹದಗೆಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲು ಗಾಯಕ ಚಂದನ್ ಶೆಟ್ಟಿ ಸಲಹೆ ನೀಡಿದರು.
ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಕೈಗೊಂಡಿದ್ದ ಮ್ಯಾರಥ್ಯಾನ್ ಓಟಕ್ಕೆ ಚಾಲನೆ ನೀಡಿದರು. ಜೀವನದಲ್ಲಿ ಆರೋಗ್ಯವೇ ಮುಖ್ಯ. ಇದನ್ನು ಮೊದಲು ಪ್ರಧಾನವಾಗಿ ಪರಿಗಣಿಸಿ, ಒಳ್ಳೆಯ ಚಟುವಟಿಕೆಯಿಂದ ನೆಮ್ಮದಿಯ ಜೀವನ ಸಾಗಿಸಲಾಗುತ್ತಿತ್ತು. ಆದರೆ, ಇಂದು ಕಾಲ ಬದಲಾಗಿದೆ. ರಾಸಾಯಾನಿಕ ಪದಾರ್ಥಗಳನ್ನು ಹೊಂದಿರುವ ಆಹಾರವನ್ನು ಸೇವಿಸಲಾಗುತ್ತಿದೆ. ಬಹುತೇಕರಿಗೆ ಜಂಕ್ ಫುಡ್ ಹೆಚ್ಚಿನ ರುಚಿಕರ ಪದಾರ್ಥವಾಗಿದೆ. ಇದರಿಂದ ಆರೋಗ್ಯ ಹದಗೆಡುತ್ತಿದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಬೊಜ್ಜು ಜತೆಗೆ ನಾನಾ ಸಮಸ್ಯೆಗಳಿಗೆ ತ್ವರಿತವಾಗಿ ತುತ್ತಾಗಿ ಆಸ್ಪತ್ರೆಗೆ ಆಲೆಯುವಂತಾಗಿದೆ ಎಂದು ಬೇಸರಿಸಿದರು.
ನಟಿ ಸಂಜನಾ ನಾಯ್ಡು ಮಾತನಾಡಿ, ಮಾದಕ ವಸ್ತುಗಳ ಸೇವನೆಯು ಅಪಾಯಕಾರಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಇದಕ್ಕೆ ದಾಸರಾಗುವಂತಹುದು ಮೂರ್ಖತನ. ಯುವ ಜನರು ಸದಾ ದುಶ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
*ಓಡಿ, ಕುಣಿದು ಕುಪ್ಪಳಿಸಿದರು
ಅಪರಾಧ ನಿಗ್ರಹ, ಸಂಚಾರಿ ನಿಯಮ, ಮಹಿಳಾ ಸಬಲೀಕರಣ ಜಾಗೃತಿಗಾಗಿ ರ್ಯಾಲಿಯಲ್ಲಿ ಖ್ಯಾತ ಗಾಯಕ ಚಂದನ್ ಶೆಟ್ಟಿ, ಸಿನಿಮಾ ನಟಿಯರಾದ ಸಂಜನಾ ನಾಯ್ಡು, ಅಚ್ಚುಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಎಸ್.ಎಸ್.ಮಹೇಶ್ ಕುಮಾರ್ ಸೇರಿದಂತೆ ಹಲವರು ಹಿರಿಯರು, ಕಿರಿಯರು ಎನ್ನದೇ ಕುಣಿದು ಕುಪ್ಪಳಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಉತ್ಸಾಹದಿಂದ ಓಡಿ, ಗಮನ ಸೆಳೆದರು. ಹಾಗೆಯೇ ವಿದ್ಯಾರ್ಥಿಗಳನ್ನು ಹುರಿದುಂಬಿಸಿಕೊಂಡು ಸಾಗಿದರು.