ಜಿಲ್ಲೆ

ಸೋದರನ ಶವವಿದ್ದ ಕಾರಲ್ಲೇ ನಟಿ ಶನಾಯ ಪ್ರಯಾಣ: ಹೈಸ್ಕೂಲ್​ನಲ್ಲೇ ಲವ್, ಪೊಲೀಸರಲ್ಲಿ ಮೂಡಿತು ಹೊಸ ಅನುಮಾನ

ಹುಬ್ಬಳ್ಳಿ: ವಾಣಿಜ್ಯ ನಗರಿಯನ್ನೇ ಬೆಚ್ಚಿ ಬೀಳಿಸಿರುವ ರುಂಡ- ಮುಂಡ ಪ್ರಕರಣದ ಭಯಾನಕ ಟ್ರಾವೆಲ್ ಹಿಸ್ಟರಿ ಪೊಲೀಸರ ತನಿಖೆಯಿಂದ ಬಯಲಿಗೆ ಬಂದಿದೆ. ರಾಕೇಶ ಕಾಟವೆ ಕೊಲೆಗೈದ ಹಂತಕರು ಮೂರು ದಿನ ಶವದೊಂದಿಗೆ ಓಡಾಡಿದ್ದರು. ಈ ವೇಳೆ ರಾಕೇಶನ ಸಹೋದರಿ, ನಟಿ ಶನಾಯಳೂ ಶವ ಇದ್ದ ಕಾರಿನಲ್ಲಿ ಹಂತಕರೊಂದಿಗೆ ಪಯಣಿಸಿದ್ದಳೆಂಬುದು ಗೊತ್ತಾಗಿದೆ. ಹೀಗಾಗಿ, ಈ ಕೊಲೆಯಲ್ಲಿ ಶನಾಯ ಕೂಡ ಕೈಜೋಡಿಸಿದ್ದಾಳೆಯೇ ಎಂಬ ಅನುಮಾನ ಮೂಡಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಗುಜರಾತ್ ಮೂಲದ ರಾಕೇಶ ಕಾಟವೆ ಚಿಕ್ಕವನಿದ್ದಾಗಲೇ ಅಪ್ಪ- ಅಮ್ಮನನ್ನು ಕಳೆದುಕೊಂಡಿದ್ದ. ಹಳೇ ಹುಬ್ಬಳ್ಳಿ ಶಿಮ್ಲಾ ನಗರದ ಶನಾಯಳ ತಾಯಿ, ರಾಕೇಶನನ್ನು ದತ್ತು ಪಡೆದಿದ್ದರು. ಕೆಲ ವರ್ಷಗಳ ಹಿಂದೆ ಶನಾಯಳ ತಾಯಿಯೂ ಮೃತಪಟ್ಟಿದ್ದಾರೆ. ಶನಾಯ ಹಾಗೂ ನಿಯಾಜ್ ಪ್ರೀತಿಗೆ ರಾಕೇಶ ಅಡ್ಡಿಯಾಗಿದ್ದ. ಇದೇ ವಿಚಾರವಾಗಿ ಮೂವರ ನಡುವೆ ಹಲವು ಸಲ ಜಗಳ ಏರ್ಪಟ್ಟಿತ್ತು. ಈ ಪ್ರಕರಣ ಕೇಶ್ವಾಪುರ ಪೊಲೀಸ್ ಠಾಣೆಯ ಮೆಟ್ಟಿಲೂ ಏರಿತ್ತು.

ಸಿನಿಮಾವೊಂದರ ಧ್ವನಿ ಸುರುಳಿ ಬಿಡುಗಡೆಗಾಗಿ ಏ.9ರಂದು ಹುಬ್ಬಳ್ಳಿಗೆ ಬಂದಿದ್ದ ಶನಾಯ ಪ್ರಿಯಕರ ನಿಯಾಜ್ ಮನೆಯಲ್ಲಿ ಉಳಿದುಕೊಂಡಿದ್ದಳು. ಈ ವಿಷಯ ತಿಳಿದ ರಾಕೇಶ, ನಿಯಾಜ್ ಬಳಿ ಜಗಳ ತೆಗೆದಿದ್ದ. ‘ನನ್ನ ತಂಗಿಯನ್ನು ದೂರ ಮಾಡುತ್ತಿದ್ದೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದ. ‘ತಾನು ರಾಜಕೋಟ್​ಗೆ ಹೋಗುತ್ತಿದ್ದು 2 ಸಾವಿರ ರೂ. ಕೊಡು. ನಂತರ ನಿಮ್ಮನ್ನು ನೋಡಿಕೊಳ್ಳುತ್ತೇನೆ’ ಎಂದು ನಿಯಾಜ್ ಬಳಿ ರಾಕೇಶ ಹೇಳಿದ್ದ ಎನ್ನುವುದು ಗಮನಾರ್ಹ.

ನಿಯಾಜ್ ಬಳಿ ರಾಕೇಶ ಜಗಳವಾಡಿದ ನಂತರ ಬಾರ್​ವೊಂದರಲ್ಲಿ ಮದ್ಯ ಸೇವಿಸಿ, ಬೈಪಾಸ್ ಬಳಿ ಬಿಡುವಂತೆ ಕೇಳಿದ್ದ. ನಿಯಾಜ್ ಮತ್ತು ಸಹಚರ ಬೈಪಾಸ್​ಗೆ ಕರೆದುಕೊಂಡು ಹೋಗಿದ್ದ ವೇಳೆ ರಾಕೇಶ ಮತ್ತೆ ಜಗಳ ಕಾಯ್ದಿದ್ದ. ಇದರಿಂದ ಆಕ್ರೋಶಗೊಂಡ ನಿಯಾಜ್ ರಾಕೇಶನ ಕತ್ತು ಹಿಸುಕಿ ಕೊಲೆಗೈದಿದ್ದ. ನಂತರ ಕಾರಿನಲ್ಲಿ ಕುಳಿತುಕೊಂಡಿರುವ ಭಂಗಿಯಲ್ಲಿ ರಾಕೇಶನ ಶವ ಇಟ್ಟುಕೊಂಡು ಶಿಮ್ಲಾ ನಗರದ ತನ್ನ ಮನೆಗೆ ಬಂದಿದ್ದರು.

ಮನೆಯಲ್ಲಿದ್ದ ಶನಾಯ ಬಳಿ ‘ನಿನ್ನ ಅಣ್ಣನಿಗೆ ಯಾರೋ ಹೊಡೆದಿದ್ದಾರೆ. ಆಸ್ಪತ್ರೆಗೆ ತೋರಿಸಬೇಕು. ನೀನು ಕೇಶ್ವಾಪುರದಲ್ಲಿನ ನನ್ನ ಹೊಸ ಬಾಡಿಗೆ ಮನೆಗೆ ಹೋಗು’ ಎಂದು ಕಾರಿನಲ್ಲಿ ಹತ್ತಿಸಿದ್ದ. ಕುಳಿತ ಭಂಗಿಯಲ್ಲೇ ಇದ್ದ ಸಹೋದರನ ಶವದೊಂದಿಗೆ ಶನಾಯ ಸಂಚರಿಸಿದ್ದಳು. ನಂತರ ನಿಯಾಜ್ ಶಿಮ್ಲಾ ನಗರದ ಮನೆಯಲ್ಲಿ ರಾಕೇಶನ ಶವ ಇರಿಸಿದ್ದರು.

ಏ. 10ರಂದು ಶವದ ರುಂಡ-ಮುಂಡ, ಕೈಕಾಲು ಕತ್ತರಿಸಿ ಬೇರ್ಪಡಿಸಿದ್ದರು. ಬಳಿಕ ರಮ್ಯ ರೆಸಿಡೆನ್ಸಿ ಬಳಿ ಜಮೀನೊಂದರಲ್ಲಿ ರಾತ್ರಿ ಶವವನ್ನು ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದರು. ವಾಪಸ್ ಬಂದಾಗ ಡಿಕ್ಕಿ ತೆಗೆದು ನೋಡಿದರೆ ರಾಕೇಶನ ರುಂಡ ಅಲ್ಲೇ ಇತ್ತು. ಮತ್ತೆ ದೇವರಗುಡಿಹಾಳಕ್ಕೆ ತೆರಳಿ ಅಲ್ಲಿ ರುಂಡ ಸುಟ್ಟು ಹಾಕಿದ್ದಾರೆ.

ಏ. 11ರಂದು ಮತ್ತೆ ಬೈಪಾಸ್ ಬಳಿ ಹೋಗಿ ಅರ್ಧಂಬರ್ಧ ಸುಟ್ಟು ಹಾಕಿದ್ದ ದೇಹವನ್ನು ಚೀಲದಲ್ಲಿ ತುಂಬಿಕೊಂಡು ವಾಪಸಾಗಿದ್ದರು. ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ ಹೆಣ ಹೂಳಲೆಂದು ಕಾರ್ವಿುಕರನ್ನು ಕರೆಸಿ ಗುಂಡಿ ತೋಡಿಸಿದ್ದರು. ಇನ್ನೇನು ಹೂತು ಹಾಕಬೇಕು ಎನ್ನುವಷ್ಟರಲ್ಲಿ ಕೇಶ್ವಾಪುರ ರಸ್ತೆಯಲ್ಲಿ ನಿಂತಿದ್ದ ಚಾಲುಕ್ಯ ವಾಹನ ಕಂಡು ಭಯಭೀತರಾಗಿ ನಿರ್ಜನ ಪ್ರದೇಶದಲ್ಲಿ ಶವ ಬಚ್ಚಿಟ್ಟು ಬಂದಿದ್ದರು. ಮರುದಿನ ಹೂತು ಹಾಕಲು ಸಂಚು ರೂಪಿಸಿದ್ದರು. ಅಷ್ಟೊತ್ತಿಗಾಗಲೇ ರುಂಡ- ಮುಂಡ ಪೊಲೀಸರ ಕಣ್ಣಿಗೆ ಬಿದ್ದಿತ್ತು.

ಹೈಸ್ಕೂಲ್​ನಲ್ಲೇ ಲವ್
ಪ್ರಮುಖ ಆರೋಪಿ ನಿಯಾಜ್ ಹಾಗೂ ಶನಾಯಳ ನಡುವೆ ಹೈಸ್ಕೂಲ್​ನಲ್ಲೇ ಲವ್ ಶುರುವಾಗಿರುತ್ತದೆ. ಅಂದಿನಿಂದಲೇ ರಾಕೇಶ ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸುತ್ತಿರುತ್ತಾನೆ. ವಿದ್ಯಾಭ್ಯಾಸದ ನಂತರ ಶನಾಯ ಮಾಡೆಲಿಂಗ್ ಕ್ಷೇತ್ರಕ್ಕೆ ಹೋಗಿ ನಂತರ ಸಿನಿಮಾದಲ್ಲಿ ಪಾತ್ರ ಗಿಟ್ಟಿಸಿಕೊಳ್ಳುತ್ತಾಳೆ. ನಂತರವೂ ಹುಬ್ಬಳ್ಳಿಗೆ ಬಂದಾಗ ನಿಯಾಜ್ ಜತೆಯಲ್ಲೇ ವಾಸವಾಗಿರುತ್ತಿದ್ದಳು ಎನ್ನಲಾಗಿದೆ.