ಮೈಸೂರು: ಚಲನಚಿತ್ರ ನಟ ಶಿವರಾಜ್ ಕುಮಾರ್ ಅವರು ಮೈಸೂರು ಅರಮನೆಯಲ್ಲಿರುವ ದಸರಾ ಗಜಪಡೆಯನ್ನು ವೀಕ್ಷಿಸಿ ಸಂಭ್ರಮಿಸಿದರು.
ಆನೆಗಳಿಗೆ ಕಬ್ಬು ನೀಡಿ ಫೋಟೋ ತೆಗೆಸಿಕೊಂಡರು. ಗಜಪಡೆಯ ಹಿರಿಯ ಆನೆ ಅರ್ಜುನ, ಅಂಬಾರಿ ಆನೆ ಅಭಿಮನ್ಯು ಆಶೀರ್ವಾದ ಪಡೆದುಕೊಂಡರು. ಮಾವುತರು- ಕಾವಾಡಿಗರು ಹಾಗೂ ಅವರ ಮಕ್ಕಳು, ನೆಚ್ಚಿನ ನಾಯಕ ನಟ ಬಂದಿರುವುದನ್ನು ನೋಡಿ ಪುಳಕಿತರಾದರು.
ಮಾವುತರು ತಮ್ಮ ಆನೆಗಳು ಹಾಗೂ ದಸರಾದಲ್ಲಿ ಅವುಗಳಿಗೆ ನೀಡಿರುವ ಜವಾಬ್ದಾರಿಯನ್ನೂ ಪರಿಚಯಿಸಿದರು. ಮಕ್ಕಳೂ ಶಿವಣ್ಣ ಅವರ ಜತೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ಟೆಂಟ್ ಶಾಲೆಗೆ ತೆರಳಿದ ಶಿವಣ್ಣ, ಮಾವುತರ- ಕಾವಾಡಿಗರ ಮಕ್ಕಳೊಂದಿಗೆ ಸಂಭ್ರಮಿಸಿದರು. ಪ್ರತಿಯೊಬ್ಬರ ಹೆಸರು ಕೇಳಿದ ಅವರು, ಆ ಮಕ್ಕಳ ಹಾಡಿಗಳ ಕುರಿತು ಮಾಹಿತಿ ಪಡೆದರು.
ಈ ವೇಳೆ ಶಿವಣ್ಣ ಅವರ ಚಿತ್ರಗಳ ಸಂಭಾಷಣೆಗಳನ್ನು ಮಕ್ಕಳೇ ಹೇಳಿ ನಗಿಸಿದರು. ಶಾಲೆಯ ಶಿಕ್ಷಕರನ್ನೂ ಮಾತನಾಡಿಸಿದರು.‘ಚೆನ್ನಾಗಿ ಓದಬೇಕು’ ಎಂದು ಎಲ್ಲ ಮಕ್ಕಳಿಗೆ ಕಿವಿಮಾತು ಹೇಳಿದರು.