ಬೆಂಗಳೂರು : ಕರ್ನಾಟಕ ಸ್‌ಟಾಬಾಲ್ ಪ್ರೀಮಿಯರ್ ಲೀಗ್ (ಕೆ.ಎಸ್.ಪಿ.ಎಲ್) 2ನೇ ಆವೃತ್ತಿಯು ನ.1 ರಿಂದ 29 ರ ವರೆಗೆ ನಡೆಯಲಿದ್ದು, ಇದರ ಜರ್ಸಿ ಅನಾವರಣ ಕಾರ್ಯಕ್ರಮವು ಮಂಗಳವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ರಾಜ್ಯದಲ್ಲಿ ಕ್ರೀಡಾ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವುದರಿಂದ ಉತ್ತಮ ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತದೆ ಎಂದರು.
ಕೆಎಸ್‌ಪಿಎಲ್ ಅಧ್ಯಕ್ಷ ಗಂಗಾಧರ್ ರಾಜು ಮಾತನಾಡಿ ಕರ್ನಾಟಕದಲ್ಲಿ ಕ್ರಿಕೆಟ್ ಸಮರ ಆರಂಭವಾಗಿದೆ. ಗಲ್ಲಿ ಕ್ರಿಕೆಟ್ ವಿಶ್ವಮಟ್ಟಕ್ಕೆ ಬೆಳೆಯಬೇಕು ಅದ್ದರಿಂದ ಕೆ.ಎಸ್.ಪಿ.ಎಲ್.ಆರಂಭವಾಗಿದೆ. ಇದರಿಂದ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಸಿಗಲಿದೆ. ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಇದರ ರಾಯಭಾರಿಯಾಗಿದ್ದಾರೆ. ಸೋಲದೇವನಹಳ್ಳಿ ಆಚಾರ್ಯ ಕ್ರೀಡಾಂಗಣದಲ್ಲಿ ಹಗಲು-ರಾತ್ರಿ ಪಂದ್ಯಗಳು ನಡೆಯಲಿದ್ದು, ಈ ಸೀಸನ್‌ನಲ್ಲಿ 8 ಗುಂಪುಗಳಲ್ಲಿ 32 ತಂಡಗಳು ಭಾಗವಹಿಸಲಿವೆ. ಪ್ರತಿ ಆಟಗಾರರಿಗೆ ಸಂಭಾವನೆ ಕೊಡಲಾಗುವುದು ಅಂತಿಮ ಪಂದ್ಯದಲ್ಲಿ ಗೆದ್ದ ತಂಡಕ್ಕೆ 1ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದರು.
ಕರ್ನಾಟಕ ರಾಜ್ಯವನ್ನು ಆಳ್ವಿಕೆ ಮಾಡಿದ ರಾಜ-ಮಹಾರಾಜರುಗಳಾದ ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರದ ಸಾಮ್ರಾಜ್ಯ, ಕೆಳದಿ ಸಾಮ್ರಾಜ್ಯ, ಮೈಸೂರು ಸಾಮ್ರಾಜ್ಯ ಹೀಗೆ 8 ಗುಂಪುಗಳಾಗಿ ರಚನೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ನಟ ಶಶಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್, ಜಯ ಕರ್ನಾಟಕ ಸಂಘಟನೆ ಬೆಂಗಳೂರು ಅಧ್ಯಕ್ಷ ಬಿ.ಯೋಗನಂದ, ಕರ್ನಾಟಕ ಲೀಗಲ್ ಸೆಲ್ ಕಾರ್ಯದರ್ಶಿ ಮೋಹನ್ ಕುಮಾರ್ ನಲ್ವಾಡ್, ಸಾರಿಗೆ ಉಪ ಆಯುಕ್ತ ಮಂಜುನಾಥ್, ಕೆ.ಎಸ್.ಪಿ.ಎಲ್. ಅಧ್ಯಕ್ಷ ಗಂಗಾಧರ್ ರಾಜು, ಪದಾಧಿಕಾರಿಗಳಾದ ಚೇತನ್, ರಘು, ಅಕುಲ್, ಸಿದ್ದು ದೇಸಾಯಿ, ಪ್ರದೀಪ್, ನವೀನ್, ಚಿತ್ರನಟಿಯರಾದ ಮಾನ್ವಿತಾ, ರೇಷ್ಮಾ ನಾಣಯ್ಯ, ಪ್ರೀತಿಗೌಡ, ಪ್ರಾಚಿ ಗೌಡ, ಪೃಥ್ವಿ ಅಂಬರ್, ಸಾತ್ವಿಕ, ಬೃಂದಾ ಆಚಾರ್ ಮತ್ತಿತರರು ಪಾಲ್ಗೊಂಡಿದ್ದರು.
"ಕ್ರಿಕೆಟ್‌ಗೆ ಎಲ್ಲ ದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಸೋಲು-ಗೆಲುವು ಮುಖ್ಯವಲ್ಲ ಕ್ರೀಡಾಚಟುವಟಿಕೆ ಮುಖ್ಯ. ಗ್ರಾಮೀಣ ಭಾಗದಲ್ಲಿರುವವರಿಗೆ ಕ್ರಿಕೆಟ್ ಆಟಗಾರರಾಗಬೇಕೆಂಬ ಬಯಕೆ ಇರುತ್ತದೆ ಅವರ ಆಸೆ ಈಡೇರಿಸಲು ಕೆ.ಎಸ್.ಪಿ.ಎಲ್. ಸಹಕಾರಿಯಾಗಿದೆ." -ಶಶಿಕುಮಾರ್, ಚಿತ್ರನಟ