ಜಿಲ್ಲೆ

ನಟ ರಾಮಕೃಷ್ಣ, ಕಾಯಕಯೋಗಿ ಅಣ್ಣಾರಾಯರಗೆ ‘ನಮ್ಮನೆ’ ಪ್ರಶಸ್ತಿ ಪ್ರಕಟ

ಶಿರಸಿ: ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ನೀಡುವ ‘ನಮ್ಮನೆ’ ಪ್ರಶಸ್ತಿಗೆ ನಟ ನೀರ್ನಳ್ಳಿ ರಾಮಕೃಷ್ಣ, ಕಾಯಕಯೋಗಿ ಪುರಸ್ಕಾರಕ್ಕೆ ಬೆಂಗಳೂರಿನ ಅವಿನಾಶಿ ಸಂಸ್ಥೆಯ ಸ್ಥಾಪಕ ಅಣ್ಣಾರಾಯ ಎಸ್. ತಳವಾರ ಹಾಗೂ ನಮ್ಮನೆ ಯುವ ಪುರಸ್ಕಾರಕ್ಕೆ ಧಾರವಾಡದ ಯುವ ಗಾಯಕಿ ಐಶ್ವರ್ಯಾ ದೇಸಾಯಿ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 8ರಂದು ಶಿರಸಿಯ ಬೆಟ್ಟಕೊಪ್ಪದಲ್ಲಿ ನಡೆಯುವ 13ನೇ ವರ್ಷದ ‘ನಮ್ಮನೆ ಹಬ್ಬ’ದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ನೀರ್ನಳ್ಳಿ ಅವರು ಚಿಕ್ಕಂದಿನಿಂದಲೇ ಯಕ್ಷಗಾನ ಹಾಗೂ ಸಂಗೀತದ ಆಸಕ್ತಿ ಬೆಳಸಿಕೊಂಡು ಪದವಿ ಶಿಕ್ಷಣ ಬಳಿಕ ಗುಬ್ಬಿ ವೀರಣ್ಣರ ನಾಟಕ ಕಂಪನಿ ಸೇರಿದರು. ಮುಂದೆ ‘ಬಬ್ರುವಾಹನ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡದಲ್ಲಿ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಅಣ್ಣರಾಯ ತಳವಾರರು ಮೂಲತಃ ಕಲಬುರಗಿಯ ಹಾಗರಗಿ ಗ್ರಾಮದವರಾಗಿದ್ದು, ಬಡತನದ ಮಧ್ಯೆಯೂ ಒಬ್ಬಂಟಿಯಾಗಿ ಅವಿನಾಶಿ ಸಂಸ್ಥೆ ಆರಂಭಿಸಿ ಇಂದು 150ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದ್ದಾರೆ. ಯುವ ಪುರಸ್ಕಾರಕ್ಕೆ ಆಯ್ಕೆಯಾದ ಐಶ್ವರ್ಯಾ, ಈಗಾಗಲೇ ರಾಜ್ಯದ ಹಲವಡೆ ಸಂಗೀತ ಕಛೇರಿ ನೀಡುತ್ತಿರುವ ಪ್ರತಿಭಾವಂತ ಯುವ ಗಾಯಕಿ ಅನೇಕ ಪ್ರತಿಷ್ಠಿತ ವೇದಿಕೆಯಲ್ಲಿ ಕೂಡ ಗಾಯನದ ಮೂಲಕ ಗಮನ ಸೆಳೆದಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ಗಾಯಿತ್ರಿ ರಾಘವೇಂದ್ರ ತಿಳಿಸಿದ್ದಾರೆ.