ಉಡುಪಿ: ದೇಶವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ನಾಯಕ ಅಧಿಕಾರಕ್ಕೆ ಬರಬೇಕು. ಇದಕ್ಕಾಗಿ ಗುರುವಾರ ರಾತ್ರಿ ಬೆಂಗಳೂರಿಂದ ಹೊರಟು ಉಡುಪಿಗೆ ಬಂದಿದ್ದೇನೆ. ನಾನು ಬೆಂಗಳೂರು ಸೇರಿ 18 ವರ್ಷವಾಗಿದ್ದರೂ ಪ್ರತಿ ಬಾರಿ ವೋಟಿಗಾಗಿ ಉಡುಪಿಗೆ ಬರುತ್ತೇನೆ. ವೋಟು ನಮ್ಮ ಹಕ್ಕು ನಮ್ಮ ಜವಾಬ್ದಾರಿಯಾಗಿದೆ. ವೋಟ್ ಗೋಸ್ಕರ ಬೆಂಗಳೂರಿಂದ ಊರಿಗೆ ಬರುವುದು ಖುಷಿ ವಿಚಾರ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದರು.
ಶುಕ್ರವಾರ ನಗರದ ಅಲೆವೂರು ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷದಲ್ಲಿ ಯಾವ ಅಭಿವೃದ್ಧಿಯಾಗಿದೆ. ಮುಂದಿನ ಐದು ವರ್ಷ ಯಾವ ನಾಯಕ ಅಧಿಕಾರಕ್ಕೆ ಬರಬೇಕು ಎಂಬುದಾಗಿ ಯೋಚಿಸಿ ವೋಟ್ ಹಾಕುತ್ತೇನೆ. ಇದಕ್ಕೂ ಮುನ್ನ ರಾಜಕೀಯ ತಿಳಿದವರ ಜೊತೆ ತರ್ಕ ಮಾಡಿ ಮತ ಹಾಕುತ್ತೇನೆ. ಯಾವಾಗಲೂ ನಾನು ಒಂದು ನಿರ್ಧಾರಕ್ಕೆ ಬಂದ ನಂತರವೇ ಮತ ಚಲಾಯಿಸುತ್ತೇನೆ. ನಾನು ಮತ ಹಾಕಿದವರು ಶೇ. 100 ಗೆಲ್ಲುತ್ತಾರೆ ಡೌಟೇ ಇಲ್ಲ, ನಾನು ಯಾರಿಗೆ ಮತ ಹಾಕಿದ್ದೇನೆ ಎಂಬುದನ್ನು ಮುಂದಿನ ವರ್ಷ ಹೇಳುತ್ತೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಕಡ್ಡಾಯ ಮತದಾನ ನಿಯಮ ಜಾರಿ ಮಾಡಬೇಕೆಂದು ಪೇಜಾವರ ಶ್ರೀ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಅವರು, ಮತ ಹಾಕದೆ ಯಾರನ್ನು ದೂರಲು ನಮಗೆ ಹಕ್ಕು ಇಲ್ಲ. ಕಡ್ಡಾಯ ಮತದಾನ ಬಹಳ ಒಳ್ಳೆಯ ಯೋಚನೆಯಾಗಿದೆ. ಎಲ್ಲಾ ಜನರನ್ನು ಮತಗಟ್ಟೆಗೆ ತರುವುದು ಟಫ್ ಟಾಸ್ಕ್, ಮುಂದೆ ಐದು- ಹತ್ತು ವರ್ಷದಲ್ಲಿ ಅದನ್ನು ಜಾರಿಗೆ ತರಬಹುದು. ಅಂತರ್ಜಾಲದ ಮೂಲಕ ಮತ ಹಾಕುವ ವ್ಯವಸ್ಥೆ ಬಂದರೆ ಶೇ. 100ರಷ್ಟು ಮತದಾನ ಸಾಧ್ಯವಾಗಬಹುದು ಎಂದರು. ತಂದೆ ಶ್ರೀಧರ್ ಶೆಟ್ಟಿ, ತಾಯಿ ರಂಜನಾ ಶೆಟ್ಟಿ, ಅಣ್ಣ ರಂಜಿತ್ ಶೆಟ್ಟಿ ಜೊತೆಗಿದ್ದರು.