ಜಿಲ್ಲೆ

ಮೈಸೂರಿನ ಮಿಷನ್ ಆಸ್ಪತ್ರೆಗೆ ‘ಅಪ್ಪು ಎಕ್ಸ್‌ಪ್ರೆಸ್’ ಆಂಬುಲೆನ್ಸ್ ಕೊಡುಗೆ ನೀಡಿದ ನಟ ಪ್ರಕಾಶ್ ರಾಜ್

ಮೈಸೂರು: ನಟನೆ ಹಾಗೂ ಸಮಾಜಸೇವಾ ಕಾರ್ಯಗಳ ಮೂಲಕ ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿರುವ ನಟ ದಿ. ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ‘ಅಪ್ಪು ಎಕ್ಸ್‌ಪ್ರೆಸ್’ ಹೆಸರಿನಲ್ಲಿ ಆಂಬುಲೆನ್ಸ್ ಸೇವೆ ನೀಡಲು ನಿರ್ಧರಿಸಿರುವ ನಟ ಪ್ರಕಾಶ್ ರಾಜ್ ಶನಿವಾರ ಈ ಸೇವಾ ಕಾರ್ಯಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಾಲನೆ ನೀಡಿದರು.

‘ಪ್ರಕಾಶ್ ರಾಜ್ ಫೌಂಡೇಷನ್’ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಿಗೆ ತಲಾ ಒಂದು ಆಂಬುಲೆನ್ಸ್ ನೀಡಲಾಗುತ್ತಿದ್ದು, ಶನಿವಾರ ಮಂಡಿ ಮೊಹಲ್ಲಾದ ಮಿಷನ್ ಆಸ್ಪತ್ರೆಗೆ ಆಂಬ್ಯುಲೆನ್ಸ್‌ಅನ್ನು ಸಿಸ್ಟರ್ ಸುಜಾತ ಅವರಿಗೆ ಪ್ರಕಾಶ್ ರಾಜ್ ಹಸ್ತಾಂತರಿಸಿದರು. ನಂತರ ಮಾತನಾಡಿದ ಪ್ರಕಾಶ್‌ರಾಜ್, ಎಂದೆಂದಿಗೂ ನಮ್ಮ ಜತೆ ಇರುವ ಕಥಾನಾಯಕ ಅಪ್ಪು. ಅಪ್ಪು ಅಗಲಿದಾಗ ರಾಜ್ಯವೇ ಕಣ್ಣೀರು ಸುರಿಸಿತು. ನಮ್ಮೆಲ್ಲರಲ್ಲಿ ಅನಾಥ ಪ್ರಜ್ಞೆ ಕಾಡಿತು. ಅವರ ಅಗಲಿಕೆ ಕರ್ನಾಟಕದ ಪ್ರತಿಯೊಬ್ಬರಿಗೂ ಸಾಕಷ್ಟು ನೋವು ತಂದಿತು. ಅವರು ಕೈಗೊಂಡ ಸಮಾಜ ಸೇವಾ ಕಾರ್ಯಗಳ ಕುರಿತು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಕೇವಲ ಅವರ ವ್ಯಕ್ತಿತ್ವದ ಗುಣಗಾನ ಮಾಡುವ ಬದಲು ಅವರ ಹೆಸರಿನಲ್ಲಿ ಜನರಿಗೆ ಅನುಕೂಲವಾಗುವಂತಹ ಸೇವೆಗಳನ್ನು ನೀಡಬೇಕು ನಿರ್ಧರಿಸಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಆಂಬುಲೆನ್ಸ್ ನೀಡಲು ನಿರ್ಧರಿಸಲಾಗಿದೆ ಎಂದರು.

ಅಪ್ಪು ಅವರನ್ನು ಬಾಲ್ಯದಿಂದಲೇ ನೋಡಿದ್ದೇನೆ. ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ ಅಪ್ಪು ಜನಪರವಾಗಿ ಬದುಕಿದರು. ಸಣ್ಣ ಸಣ್ಣ ಚಿತ್ರಗಳನ್ನೂ ಗೆಲ್ಲಿಸಲು ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದರು. ಆ ಚಿತ್ರಗಳಲ್ಲಿ ಅಭಿನಯಿಸುವಂತೆ ಕೋರಿಕೊಂಡಾಗ ನಾನೂ ಒಪ್ಪಿಕೊಂಡೆ. ತಕ್ಷಣ ನನಗೆ 10 ಲಕ್ಷ ರೂ. ಸಂಭಾವನೆ ನೀಡಲು ಬಂದರು ಎಂದು ಸ್ಮರಿಸಿದರು.

ಒಬ್ಬ ವ್ಯಕ್ತಿ ತುಂಬಾ ಎತ್ತರಕ್ಕೆ ಬೆಳೆದಿದ್ದಾನೆ ಅನ್ನುವುದು ಯಾವಾಗ ಖಾತ್ರಿಯಾಗುತ್ತದೆ ಅಂದರೆ ಆತ ಎಷ್ಟು ಜನರನ್ನು ಇನ್ನೂ ಎತ್ತರಕ್ಕೆ ಬೆಳೆಸಿದ್ದಾನೆ ಎಂಬುದು ತಿಳಿದಾಗ. ಪುನೀತ್ ರಾಜ್‌ಕುಮಾರ್ ಅಂತಹ ಸಾಲಿಗೆ ಸೇರುತ್ತಾರೆ. ಅವರನ್ನು ಕಳೆದುಕೊಂಡು ಸಮಾಜಕ್ಕೆ ಬಹಳ ನಷ್ಟವಾಗಿದೆ. ಕೋವಿಡ್ ಸಮಯದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದೆ. ಅದನ್ನು ಗಮನಿಸಿದ ಅಪ್ಪು ಅವರು ನನಗೆ ಕರೆ ಮಾಡಿ ‘ಒಳ್ಳೆಯ ಕೆಲಸ ಮಾಡುತ್ತಿದ್ದೀರಾ’ ಎಂದು ಹೇಳಿ 2 ಲಕ್ಷ ರೂ.ಗಳನ್ನು ನಮ್ಮ ಫೌಂಡೇಷನ್‌ಗೆ ನೀಡಿದರು. ಅಪ್ಪು ಇದ್ದಿದ್ದರೆ ಮಾಡುತ್ತಿದ್ದ ಕೆಲಸವನ್ನು ನಾವು ಮುಂದುವರೆಸಿಕೊಂಡು ಹೋಗಬೇಕು. ಅದಕೋಸ್ಕರ ಅಂಬ್ಯುಲೆನ್ಸ್ ನೀಡಲು ನಿರ್ಧರಿಸಿದ್ದೇವೆ ಎಂದರು.

ಮಿಷನ್ ಆಸ್ಪತ್ರೆ ಆವರಣದಲ್ಲಿ ಬ್ಲಡ್ ಬ್ಯಾಂಕ್ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ. ಇದಕ್ಕೆ ಪೂಜಾರಿ ಫಿಷ್‌ಲ್ಯಾಂಡ್‌ನವರು 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅಪ್ಪುವನ್ನು ಪ್ರೀತಿಸುವ ಜನರಿಗೆ ನಾವು ಮಾಡುವ ಸೇವೆ ಸಹಾಯವಾಗಲಿ. ಅಪ್ಪು ವ್ಯಕ್ತಿತ್ವವನ್ನು ನಮ್ಮೊಳಗೆ ಬೆಳೆಸಿಕೊಳ್ಳಬೇಕು. ಅಪ್ಪು ಮಾಡಿದ ಕೆಲಸಗಳಿಗೆ ನಾವು ಸಮಾಜಮುಖಿ ಕೆಲಸಗಳ ಮೂಲಕ ಧನ್ಯವಾದ ಹೇಳಬೇಕು ಎಂದರು.

ನಿರ್ದೇಶಕ ಆನಂದ್‌ರಾಮ್ ಮಾತನಾಡಿ, ಅಪ್ಪು ಜನರ ಮನಸ್ಸಿನಲ್ಲಿ ದೇವರ ಸ್ಥಾನದಲ್ಲಿದ್ದಾರೆ. ಅಪ್ಪು ಕೊಟ್ಟಿದ್ದನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗದಂತೆ ಕೆಲಸ ಮಾಡಿದ್ದಾರೆ ಎಂದು ಹೇಳಿದರು.