ಜಿಲ್ಲೆ

ರಾತ್ರಿ ಸಫಾರಿ: ವಿಚಾರಣೆಗೆ ಬಂದ ನಟ ಧನ್ವೀರ್​, ಆರ್​ಎಫ್​ಇ ಹೇಳಿದ್ದೇನು?

reportermys

ಗುಂಡ್ಲುಪೇಟೆ: ಬಜಾರ್ ಚಿತ್ರದ ನಾಯಕ ಧನ್ವೀರ್ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ರಾತ್ರಿವೇಳೆ ಸಫಾರಿ ಮಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿತ್ತು. ರಾತ್ರಿ ಸಫಾರಿಗೆ ಅವಕಾಶ ಇಲ್ಲದಿದ್ದರೂ ಸಿನಿಮಾ ನಟರಿಗೆ ಅವಕಾಶ ಮಾಡಿಕೊಡಲಾಗಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಶುರುವಾದ ಬೆನ್ನಲ್ಲೇ ಚಿತ್ರನಟ ಧನ್ವೀರ್​ ಶನಿವಾರ ಬೆಳಗ್ಗೆ ಅರಣ್ಯಾಧಿಕಾರಿಗಳ ವಿಚಾರಣೆ ಎದುರಿಸಿದರು.

ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿಯ ಅರಣ್ಯ ಇಲಾಖೆ ಕಚೇರಿಗೆ ಆಗಮಿಸಿದ ಧನ್ವೀರ್​ರನ್ನು ಆರ್​ಎಫ್ಒ ನವೀನ್ ಕುಮಾರ್ ವಿಚಾರಣೆ ನಡೆಸಿದರು.

ಈ ಘಟನೆ ಸಂಬಂಧ 'ವಿಜಯವಾಣಿ'ಗೆ ಪ್ರತಿಕ್ರಿಯಿಸಿದ್ದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ, ಚಿತ್ರನಟ ಬಂಡೀಪುರದಲ್ಲಿ ರಾತ್ರಿವೇಳೆ ಸಫಾರಿ ನಡೆಸಿರುವುದು ನಿಜವಾದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸುತ್ತೇವೆ. ಪೊಲೀಸರಿಗೂ ದೂರು ನೀಡುತ್ತೇವೆ ಎಂದಿದ್ದರು.

ಈ ಸಂಬಂಧ ಧನ್ವೀರ್​ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಬಳಿಕ 'ದಿಗ್ವಿಜಯ ನ್ಯೂಸ್​' ಜತೆ ಮಾತನಾಡಿದ ಆರ್​ಎಫ್​ಒ ನವೀನ್​ ಕುಮಾರ್​, ಧನ್ವೀರ್​ ಸಫಾರಿಗೆ ಹೋಗಿದ್ದ ವೇಳೆ ಸಂಜೆ 6.20ಕ್ಕೆ ಟೈಗರ್ ನೋಡಿದ್ದು, ಅದನ್ನೇ ವಿಡಿಯೋ ಮಾಡಿದ್ದಾರೆ. ಬಂಡೀಪುರದಲ್ಲಿ ಧನ್ವೀರ್ ರಾತ್ರಿ ಸಫಾರಿ ಮಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಬರೆದುಕೊಂಡಿದ್ದಾರೆ. ಒಂದೂವರೆ ಗಂಟೆ ವಿಚಾರಣೆ ಮಾಡಿದ್ದೇವೆ. ನಿಯಮಾನುಸಾರವೇ ಬಂಡೀಪುರದಲ್ಲಿ ಸಫಾರಿ ಮಾಡಿದ್ದಾರೆ. ಧನ್ವೀರ್ ವಿರುದ್ಧ ಯಾವುದೇ ಪ್ರಕರಣ ದಾಖಲು ಮಾಡಲ್ಲ ಎಂದು ವಿವರಿಸಿದರು.