ಜಿಲ್ಲೆ

ಮೈಸೂರಿನಲ್ಲಿ ವಿವಾಹ ಸಿದ್ಧತೆ ಪರಿಶೀಲಿಸಿದ ನಟ ಡಾಲಿ ಧನಂಜಯ

ಸದೇಶ್ ಕಾರ್ಮಾಡ್

ಮೈಸೂರು: ಮೈಸೂರು ನನಗೆ ತುಂಬಾ ವಿಚಾರಗಳಲ್ಲಿ ಕನೆಕ್ಟ್ ಅಗಿರುವ ಹಿನ್ನೆಲೆಯಲ್ಲಿ ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಫೆ.15, 16 ರಂದು ವೈದ್ಯೆ ಡಾ.ಧನ್ಯತಾಳೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೇನೆ ಎಂದು ನಟ ಡಾಲಿ ಧನಂಜಯ ಹೇಳಿದರು.

ವಸ್ತು ಪ್ರದರ್ಶನ ಆವರಣದಲ್ಲಿ ಮಂಗಳವಾರ ವಿವಾಹ ಸಿದ್ಧತೆ ಪರಿಶೀಲಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಶಿಕ್ಷಣ, ಬದುಕು, ಚಿತ್ರರಂಗ ಪ್ರವೇಶ ಎಲ್ಲವೂ ಆಗಿದ್ದು ಮೈಸೂರಿನಲ್ಲಿ. ನನ್ನ ಬದುಕಿನ ಎಲ್ಲವೂ ಮೈಸೂರಿನಿಂದಲೇ ಶುರುವಾಗಿದ್ದರಿಂದ ಇಲ್ಲೇ ಮದುವೆಯಾಗುತ್ತಿದ್ದೇನೆ ಎಂದು ಹೇಳಿದರು.

ಮಂತ್ರಮಾಗಲ್ಯ, ರಿಜಿಸ್ಟರ್ ಮ್ಯಾರೇಜ್‌ಮೂಲಕ ಸರಳ ವಿವಾಹ ಆಗಬೇಕು ಎಂಬುದು ನನ್ನ ಆಸೆಯಾಗಿತ್ತು. ಸಂಬಂಧಿಕರು, ಸ್ನೇಹಿಕರು, ಚಿತ್ರರಂಗದವರು, ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಊಟ ಹಾಕಿಸುವುದು ಕಷ್ಟ ಸಾಧ್ಯ. ಹೀಗಾಗಿ ಅಭಿಮಾನಿಗಳು, ಸಂಬಂಧಿಕರ ಖುಷಿಗೆ, ಎಲ್ಲರಿಗೂ ಒಂದೇ ಕಡೆ ಊಟ ಹಾಕಿಸಲು ಇಲ್ಲಿ ಮದುವೆ ಆಗುತ್ತಿದ್ದೇನೆ. ಎಲ್ಲರೂ ಬಂದು ಆಶೀರ್ವಾದ ಮಾಡಿ ಎಂದು ಹೇಳಿದರು.

ಮದುವೆಗೆ ಸಿನಿಮಾ ರಂಗದವರು, ರಾಜಕಾರಣಿಗಳು ಸೇರಿದಂತೆ ಎಲ್ಲರನ್ನೂ ಆಹ್ವಾನಿಸಿದ್ದೇನೆ. ಅಭಿಮಾನಿಗಳಿಗೂ ಮುಕ್ತ ಅವಕಾಶ ಇದೆ. ವಿಐಪಿಗಳು, ಗಣ್ಯರು, ಅಭಿಮಾನಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳಿಗೆ ವಿದ್ಯಾಪತಿ ದ್ವಾರ ನಿರ್ಮಿಸಲಾಗಿದ್ದು, ನೇರವಾಗಿ ಸ್ಟೇಜ್ ಬಳಿ ಬಂದು ನೋಡಿಕೊಂಡು ಹೋಗಬಹುದು. ಸುಮಾರು 25-30 ಸಾವಿರ ಜನ ಆಗಮಿಸುವ ನಿರೀಕ್ಷೆ ಇದ್ದು, ಯಾವುದೇ ನೂಕುನುಗ್ಗಲು, ಗೊಂದಲ ಆಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ದಕ್ಷಿಣ ಭಾರತದ ಮಾದರಿಯ ಊಟದ ವ್ಯವಸ್ಥೆ ಇರಲಿದ್ದು, ಅಭಿಮಾನಿಗಳು, ವಿಐಪಿ ಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಆದರೆ ಎಲ್ಲರಿಗೂ ಒಂದೇ ಮಾದರಿಯ ಊಟ ಇರುತ್ತದೆ. ವಿತರಣೆಗೆ 45 ಕೌಂಟರ್ ತೆರೆಯಸಲಾಗುವುದು. ಬಾಳೆ ಎಲೆಯ ಊಟವೂ ಇರಲಿದೆ ಎಂದು ಮಾಹಿತಿ ನೀಡಿದರು.