ಬೆಂಗಳೂರು: ನಗರದ ವಿವಿಧ ವೃಕ್ಷೋದ್ಯಾನ ಮತ್ತು ಸಂಶೋಧನಾ ಕೇಂದ್ರಗಳಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಅಧಿಕಾರಿಗಳೊಂದಿಗೆ ಸೋಮವಾರ ಭೇಟಿ ನೀಡಿ ನೈಸರ್ಗಿಕ ವೃಕ್ಷೋದ್ಯಾನ ಸ್ಥಾಪನೆ ಕುರಿತು ಪರಿಶೀಲಿಸಿದರು.
ಕಲ್ಕೆರೆ ಅರಣ್ಯ ವೃಕ್ಷೋದ್ಯಾನ, ದೊರೆಸಾನಿ ಸಂಶೋಧನಾ ಕೇಂದ್ರ ಹಾಗೂ ತುರಹಳ್ಳಿ ಕಿರು ಮತ್ತು ರಾಜ್ಯ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದಾಗ, ನೀಲಗಿರಿ ಮತ್ತು ಅಕೇಶಿಯ ಮರಗಳನ್ನು ಕಂಡು ಅಸಮಾಧಾನವ್ಯಕ್ತಪಡಿಸಿದರು. ಕೂಡಲೇ ಆ ಮರಗಳನ್ನು ತೆರವುಗೊಳಿಸಿ ಸ್ಥಳಿಯ ತಳಿ ಸಸಿಗಳನ್ನು ನಾಟಿ ಮಾಡಿ ಪೋಷಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಿತ್ಯಹರಿದ್ವರ್ಣ, ಅರೆ ನಿತ್ಯಹರಿದ್ವರ್ಣ, ಎಲೆ ಉದುರುವ ಹಾಗೂ ಪೊದೆ ಮತ್ತು ಮುಳ್ಳಿನ ಗಿಡಗಳನ್ನು ಸ್ವಚ್ಚಗೊಳಿಸಬೇಕು. ಉದ್ಯಾನವನಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ರೀತಿ ಅಭಿವೃದ್ಧಿಪಡಿಸಬೇಕು ಎಂದು ಸೂಚಿಸಿದರು.
ವೃಕ್ಷೋದ್ಯಾನ ಎಂದರೆ ಜನರನ್ನು ಅಕರ್ಷಿಸುವ ರೀತಿ ಇರಬೇಕು. ಭೇಟಿ ನೀಡುವವರಿಗೆ ಶೌಚಾ ಗೃಹ, ಕುಡಿಯುವ ನೀರಿನ ವ್ಯವಸ್ಥೆ, ಸ್ಥಳದ ಬಗ್ಗೆ ಮಾಹಿತಿ ನೀಡಲು ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು. ಖಾಲಿ ಜಾಗದಲ್ಲಿ ಬಹುಪಯೋಗಿ ಮರಗಳನ್ನು ನಾಟಿ ಮಾಡಬೇಕು. ಕೇಂದ್ರ ಸರ್ಕಾರದ ನಗರ ವನ ಯೋಜನೆಯಡಿ ಅರಣ್ಯ ಅಭಿವೃದ್ಧಿಗೆ ಒತ್ತು ನೀಡಬೇಕು, ಇದೀಗ ತೆಗೆದುಕೊಳ್ಳುವ ಕ್ರಮವು ತೇಗ ಸಿರಿ ಯೋಜನೆಗೂ ಸಹಕಾರಿಯಾಗಬೇಕು ಎಂದರು.
* ನೈಸರ್ಗಿಕ ಅರಣ್ಯ ನಿರ್ಮಾಣಕ್ಕೆ ಕ್ರಮ
ಕಲ್ಕರೆ ವೃಕ್ಷೋದ್ಯಾನದಲ್ಲಿ ವಿವಿಧ 126 ಪ್ರಭೇದಗಳ 4,722 ಮರಗಳು ಒಟ್ಟು 30 ಪ್ರದೇಶದಲ್ಲಿದೆ. ಸಂದರ್ಶನಕಾರರಿಗೆ ಮಾಹಿತಿ ನೀಡುವ ಲಕಗಳನ್ನು ಅಳವಡಿಸಲಾಗಿದೆ. ದೊರೆಸಾನಿಪಾಳ್ಯ ಸಂಶೋಧನಾ ಕೇಂದ್ರವನ್ನು 1974ರಲ್ಲಿ ಸ್ಥಾಪಿಸಿದ್ದು, 36.54 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದೆ. ಈ ಪ್ರದೇಶದಲ್ಲಿ ಥೈಲ್ಯಾಂಡ್, ಅರುಣಾಚಲ ಬಿದಿರು, ಕೃಷ್ಣಗಿರಿ ನೇರಳೆ, ಹುಣಸೆ ಮರ, ಬೀಟೆ, ಸೀತಾಫಲ, ತೇಗ ಮರಗಳಿವೆ. 6.5 ಹೆಕ್ಟೇರ್ನಲ್ಲಿ ಪಶ್ಚಿಮ ಘಟ್ಟದ ಪ್ರಭೇದಗಳ ನೆಡುತೋಪು ಬೆಳೆಸಲಾಗಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.
ತುರಹಳ್ಳಿ 38 ಎಕರೆ ಪ್ರದೇಶದಲ್ಲಿ ಟ್ರೀ ಪಾರ್ಕ್ ಅಭಿವೃದ್ಧಿಪಡಿಸಲಾಗಿದ್ದು, ಸಾರ್ವಜನಿಕರ ಭೇಟಿಗೆ ಅನುವು ಮಾಡಿಕೊಡಲಾಗಿದೆ. ಉಳಿದ 35 ಎಕರೆ ಜಾಗದಲ್ಲಿ ವೃಕ್ಷೋದ್ಯಾನ ವಿಸ್ತಿರಿಸುವ ಗುರಿ ಇದೆ.
ಸುಮಾರು 500 ಎಕರೆಗಿಂತಲೂ ಹೆಚ್ಚಿನ ಅರಣ್ಯ ಪ್ರದೇಶದಲ್ಲಿ 80&-85ರಷ್ಟು ನೀಲಗಿರಿ ಮತ್ತು ಅಕೇಶಿಯಾ ಮರಗಳಿದ್ದು, ಹಂತ ಹಂತವಾಗಿ ಮರಗಳನ್ನು ಕಟಾವು ಮಾಡಿ, ನೈಸರ್ಗಿಕ ಅರಣ್ಯವನ್ನು ಮರು ನಿಮಾರ್ಣ ಮಾಡಲು ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು.