ಮೂಡಲಗಿ: ಸೆ.23 ರಂದು ಕಾಂಗ್ರೆಸ್ ಹೆಸರಿನಲ್ಲಿ ನಡೆದಿದೆ ಎನ್ನಲಾದ ಸಭೆ ಅನಧಿಕೃತ. ಎದುರಾಳಿ ಪಕ್ಷದವರು ಇಂತಹ ಪಕ್ಷದ್ರೋಹಿಗಳನ್ನು ಕಟ್ಟಿಕೊಂಡು ಕಾರ್ಯಕರ್ತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅರಬಾಂವಿ ಬ್ಲಾಕ್ ಕಾಂಗ್ರೆಸ್ ಕಮೀಟಿ ಕಾರ್ಯಾಧ್ಯಕ್ಷ ಗುರಪ್ಪ ಹಿಟ್ಟಣಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಭಾಂವಿ ಮತಕ್ಷೇತ್ರದ ಪರಾಜಿತ ಅಭ್ಯರ್ಥಿ ಅರವಿಂದ ದಳವಾಯಿ ಅವರ ಅನುಮತಿ ಇಲ್ಲದೇ ಗುರ್ಲಾಪುರ ಪ್ರವಾಸಿ ಮಂದಿರದಲ್ಲಿ ಪಕ್ಷದ ಹೆಸರಿನಲ್ಲಿ ಸಭೆ ನಡೆಸಿ, ಕ್ಷೇತ್ರದ ಜನತೆಗೆ ಗೊಂದಲ ಮೂಡಿಸಿ, ರಾಜಕೀಯ ಲಾಭ ಪಡೆದುಕೊಳ್ಳಲು ಹುನ್ನಾರ ನಡೆಸಿದ್ದಾರೆ. ನಮ್ಮ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಅವರಲ್ಲ ಎಂದ ಅವರು, ಅಧಿಕೃತವಾಗಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು. 2018ರ ವಿಧಾನ ಸಭೆ ಚುನಾವಣೆಯ ನಂತರ ಪಕ್ಷದ ಸಭೆ ಮತ್ತು ಬೇರೆ ಕಾರ್ಯಕ್ರಮಗಳಲ್ಲಿ ಒಮ್ಮೆಯೂ ಕಾಣಿಸಿಕೊಳ್ಳದವರು ಈಗ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆಯ ಕಾರ್ಯ ಚುರುಕುಗೊಂಡಿದ್ದರಿಂದ ಏಕಾಏಕಿ ಪಕ್ಷ ಕಟ್ಟುವ ಕುರಿತು ಮಾತನಾಡುತ್ತಿರುವುದು ಕೇಳಿ ಆಶ್ಚರ್ಯವಾಯಿತು ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಚೌಡಯ್ಯ ತಳವಾರ, ಇಮಾಮ್‌ಸಾಬ ಹುನ್ನೂರ, ಲಕ್ಷ್ಮಣ ಅಲಕನೂರ, ಎಂ.ವೈ.ಶಿವಾನಂದ, ಆರೀಫ್ ಬಳಿಗಾರ, ಸಲೀಂ ಇನಾಮದಾರ, ಮಲೀಕ ಕಳ್ಳಿಮನಿ ಇದ್ದರು.