ಮೈಸೂರು: ಗ್ರೇಟರ್ ಮೈಸೂರು ನೆಪದಲ್ಲಿ ನಗರಪಾಲಿಕೆ ಚುನಾವಣೆ ಮುಂದೂಡುವ ನಿರ್ಧಾರದಿಂದ ಹಿಂದೆ ಸರಿದು ಕೂಡಲೇ ಚುನಾವಣೆ ನಡೆಸಬೇಕು ಎಂದು ಹೋರಾಟಗಾರರು, ಸರ್ಕಾರವನ್ನು ಆಗ್ರಹಿಸಿದರು.
ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹೋರಾಟ ಸಮಿತಿ, ಚಳವಳಿಗಾರರು, ವಿವಿಧ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ, ಮೈಸೂರು ನಗರಪಾಲಿಕೆ ಚುನಾವಣೆ ಮಾಡಬೇಕು ಎಂದು ಆಗ್ರಹಿಸಲಾಯಿತು.
ಗ್ರೇಟರ್ ಮೈಸೂರು ಬೇಡ: ಗ್ರೇಟರ್ ಮೈಸೂರು ಮಾಡಲು ಮುಂದಾಗಿರುವುದನ್ನು ಸರ್ಕಾರ ನಿಲ್ಲಿಸಬೇಕು. ಚುನಾವಣೆ ನಡೆಯದೆ ನಗರದ ವಾರ್ಡ್‌ಗಳಲ್ಲಿ ಅಗಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗುತ್ತಿದೆ. ಶಾಸಕರು ತಮ್ಮ ಹಿಡಿದ ಸಾಧಿಸಲು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆಸಕ್ತಿ ತೋರುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸ್ ಮಾತನಾಡಿ, ಗ್ರೇಟರ್ ಮೈಸೂರು ಮಾಡುವ ಮೊದಲು ಈಗಿನ ನಗರ ಪಾಲಿಕೆಯ ಸಮಸ್ಯೆಗಳನ್ನು ಬಗೆಹರಿಸಿ. ಪಾಲಿಕೆ ಚುನಾವಣೆ ಮಾಡಿದ ನಂತರವೇ ಬೃಹತ್ ಮೈಸೂರು ಬಗ್ಗೆ ಸರ್ಕಾರ ಯೋಚನೆ ಮಾಡಲಿ ಎಂದರು.
ಮಾಫಿಯಾಗೆ ಮಣೆ: ಹೋರಾಟಗಾರ ಅರವಿಂದ ಶರ್ಮ ಮಾತನಾಡಿ, ಬೃಹತ್ ಮೈಸೂರು ಮಾಡುವ ಮೂಲಕ ಸರ್ಕಾರ ರಿಯಲ್ ಎಷ್ಟೇಟ್ ಮಾಫಿಯಾಗೆ ಮಣೆ ಹಾಕುವುದು ನಿಲ್ಲಿಸಲಿ. ಈಗಿರುವ ನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಜನರಿಗೆ ಮೂಲಸೌಲಭ್ಯಗಳನ್ನು ಸಂಪೂರ್ಣವಾಗಿ ಕಲ್ಪಿಸಲು ಸಾಧ್ಯವಾಗಿಲ್ಲ. ಹಾಗಾಗಿ ನಗರದ ಹೊರವಲಯದ ಬಡಾವಣೆಗಳನ್ನು ಸೇರಿಸಿಕೊಳ್ಳುವಾಗ ಆ ಜನರಿಗೆ ತಕ್ಷಣಕ್ಕೆ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದರು.
ಜನರಲ್ಲಿ ಜಾಗೃತಿ ಮೂಡಿಸಲು ಕರಪತ್ರ ಹಂಚಿಕೆ, ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚುನಾವಣೆ ನಡೆಸುವಂತೆ ಕೋರಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಭಾರತೀಯ ಪರಿವರ್ತನಾ ಸಂಘದ ರಾಜ್ಯ ಸಂಚಾಲಕ ಸೋಸಲೆ ಸಿದ್ದರಾಜು ಮಾತನಾಡಿ ಸರ್ಕಾರ ಭಾಗ್ಯಗಳನ್ನು ಕೊಡುವುದರಲ್ಲಿ ನಿರತವಾಗಿದೆ. ಚುನಾವಣೆ ಮಾಡುವಲ್ಲಿ ವಿಳಂಬ ಮಾಡುತ್ತಿದ್ದು, ಇದನ್ನು ಎಲ್ಲರೂ ಪ್ರಶ್ನಿಸಬೇಕಿದೆ ಎಂದರು.
ಮುಖಂಡರಾದ ಯಮುನಾ, ಸೋಮರಾಜ ಅರಸು, ಪುಟ್ಟನಂಜಯ್ಯ ದೇವನೂರು , ರಾಮಯ್ಯ, ಮಾ.ಸ ಪ್ರವೀಣ್, ನಾಗೇಂದ್ರ , ಎಂ.ಎಫ್. ಕಲೀಂ, ಆದರ್ಶ ಅರಸ್, ಶ್ರೀವಾರಿ ನಾಗರಾಜ್ , ಸುರೇಶ ಬಾಬು ಇತರರು ಇದ್ದರು.